ಭಾರತಕ್ಕೂ ಮತ್ತೊಂದು ಗಂಡಾಂತರ? ಮುನ್ನೆಲೆಗೆ ಬಂದ ಅತೀಂದ್ರಿಯ ಭವಿಷ್ಯಗಾರ್ತಿ ಬಾಬಾ ವಂಗಾ ವಾಣಿ

vanga
Published on

ಸೋಫಿಯಾ: ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. 1996ರಲ್ಲಿ ಮೃತ ಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು.

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು...ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

ಭಾರತದಲ್ಲಿ, ತಾಪಮಾನವು 50 ಡಿಗ್ರಿಗಳನ್ನು ತಲುಪುತ್ತದೆ ಮತ್ತು ಮಿಡತೆಗಳು ಬೆಳೆಗಳನ್ನು ಹಾನಿಗೊಳಿಸುತ್ತವೆ ಎಂದು ಬಾಬಾ ವಂಗಾ ನುಡಿದಿದ್ದು ಕೂಡ ಇದಾಗಲೇ ನಿಜವಾಗಿದೆ. 2022ರಲ್ಲಿ ಹಲವು ಏಷ್ಯನ್ ರಾಷ್ಟ್ರಗಳು ಮತ್ತು ಆಸ್ಟ್ರೇಲಿಯಾದಲ್ಲಿ ಪ್ರವಾಹ ಉಂಟಾಗಲಿದೆ ಎಂದು ಹೇಳಿದ್ದರು. ಅದರಂತೆ ಆಸ್ಟ್ರೇಲಿಯಾದಲ್ಲಿ ಅತ್ಯಂತ ಭೀಕರ ಪ್ರವಾಹ ಸಂಭವಿಸಿದೆ. ಆಗ್ನೇಯ ಕ್ವೀನ್ಸ್‌ಲ್ಯಾಂಡ್‌ನ ಕೆಲವು ಭಾಗಗಳು, ವೈಡ್ ಬೇ-ಬರ್ನೆಟ್ ಮತ್ತು ನ್ಯೂ ಸೌತ್ ವೇಲ್ಸ್, ಬ್ರಿಸ್ಬೇನ್ ಸೇರಿದಂತೆ ಹಲವಾರು ನಗರಗಳು ಮುಳುಗಿದವು.

ಇದೀಗ ಬಾಬಾ ವಂಗಾ ನುಡಿದಿರುವ ಮತ್ತೊಂದು ಭವಿಷ್ಯ ಮುನ್ನೆಲೆಗೆ ಬಂದಿದೆ. ಅವರ ಭವಿಷ್ಯವಾಣಿಯ ಪ್ರಕಾರ, 2022ರಲ್ಲಿ ಜಗತ್ತಿಗೆ ಮತ್ತೊಂದು ಅಪಾಯ ಕಾದಿದೆ. ಕೋವಿಡ್-19ನಿಂದಾಗಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಂಡು, ಈಗಷ್ಟೇ ಜನರು ಚೇತರಿಕೆಯ ಹಾದಿಯಲ್ಲಿದ್ದಾರೆ. ಈ ಕಾಲಘಟ್ಟದಲ್ಲಿ ಮತ್ತೊಂದು ವೈರಸ್‌ ವ್ಯಾಪಿಸುವ ಕುರಿತು ಬಾಬಾ ವಂಗಾ ಅವರ ಅಂದಾಜಿದೆ.

2022ರಲ್ಲಿ ಸೈಬೀರಿಯಾದಿಂದ ಹೊಸ ಮಾರಣಾಂತಿಕ ವೈರಸ್ ಕಾಣಿಸಿಕೊಳ್ಳಲಿದ್ದು ಜಗತ್ತನ್ನೇ ಕಾಡಲಿದೆ ಎಂದು ವಾಂಗಾ ಹೇಳಿದ್ದಾರೆ. ಹೆಪ್ಪುಗಟ್ಟಿರುವ ವೈರಸ್‌ ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿ ಮುಕ್ತವಾಗಿ ಸಂಚರಿಸಲು ಶುರುವಾಗುತ್ತದೆ. ಆ ವೈರಸ್‌ ಸೈಬೇರಿಯಾದಲ್ಲಿ ಪತ್ತೆಯಾಗುತ್ತದೆ. ನಂತರ ವಿಶ್ವವನ್ನು ವ್ಯಾಪಿಸಲಿದೆ ಎಂದು ಭವಿಷ್ಯದಲ್ಲಿ ಹೇಳಲಾಗಿದೆ. ಇದನ್ನು ಸಂಶೋಧಿಸಲು ಸಂಶೋಧಕರ ತಂಡವು ಚೀನಾದ ಟಿಬೆಟಿಯನ್ ಪ್ರಸ್ಥಭೂಮಿಯಿಂದ ಎರಡು ಐಸ್ ಮಾದರಿಗಳನ್ನು ಕಂಡುಹಿಡಿದಿದೆ, ಅವುಗಳು ಪ್ರಾಚೀನ ವೈರಸ್‌ಗಳಿಂದ ಹೆಪ್ಪುಗಟ್ಟಿದ್ದಾಗಿದ್ದು, ಅವುಗಳಲ್ಲಿ ಹೆಚ್ಚಿನವು ಹಿಂದೆಂದೂ ನೋಡಿರಲಿಲ್ಲ. ಐಸ್‌ನಲ್ಲಿ 33 ವೈರಲ್ ಜೆನೆಟಿಕ್ ಕೋಡ್‌ಗಳನ್ನು ಕಂಡುಹಿಡಿಯಲಾಗಿದೆ. 33ರಲ್ಲಿ ನಾಲ್ಕು ಸಾಮಾನ್ಯವಾಗಿ ಬ್ಯಾಕ್ಟೀರಿಯಾವನ್ನು ಆಕ್ರಮಿಸುವ ವೈರಸ್ ಕುಟುಂಬಗಳಿಗೆ ಸೇರಿದವು ಎಂದು ಅದರ ಆನುವಂಶಿಕ ಸಂಕೇತಗಳಿಂದ ಗುರುತಿಸಲಾಗಿದೆ. ಇದು ವಿಜ್ಞಾನಿಗಳ ಆಕಂತಕ್ಕೆ ಕಾರಣವಾಗಿದ್ದು, ಭವಿಷ್ಯ ನಿಜವಾಗಲಿದೆಯೇ ಎಂದು ಗುಮಾನಿ ಶುರುವಾಗಿದೆ.

ಈ ವರ್ಷದಲ್ಲಿ ಭೂಮಿಯ ಮೇಲೆ ಅನ್ಯಗ್ರಹದ ಜೀವಿಗಳು ಆಕ್ರಮಣ ಮಾಡಲಿವೆ ಎಂದು ಕೂಡ ನುಡಿದಿದ್ದಾರೆ. ಜಗತ್ತಿನ ಹಲವು ಭಾಗಗಳಲ್ಲಿ ಮಿಡತೆ ಆಕ್ರಮಣ ಮಾಡಲಿದ್ದು, ಬೆಳೆ ನಾಶಕ್ಕೆ ಕಾರಣವಾಗಲಿದೆ ಎಂದು ಕೂಡ ಹೇಳಿದ್ದಾರೆ. ವರ್ಚುವಲ್ ರಿಯಾಲಿಟಿ ಬಳಕೆಯಲ್ಲಿ ಏರಿಕೆಯಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2023ರಲ್ಲಿ ಭೂಮಿಯ ಕಕ್ಷೆಯು ಬದಲಾಗುತ್ತದೆ, 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಆಕೆಯ ಭವಿಷ್ಯದ ಭವಿಷ್ಯವಾಣಿಗಳು ಸೇರಿವೆ.

2100ರ ವೇಳೆಗೆ ರಾತ್ರಿ ಎನ್ನುವುದೇ ಕಣ್ಮರೆಯಾಗುತ್ತದೆ, ಕೃತಕ ಸೂರ್ಯನ ಬೆಳಕು ಭೂಮಿಯ ಇನ್ನೊಂದು ಭಾಗವನ್ನು ಬೆಳಗಿಸುತ್ತದೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net