ಜನರನ್ನು ತಬ್ಬಿಕೊಂಡು ಗಂಟೆಯೊಂದಕ್ಕೆ 7 ಸಾವಿರ ರೂ. ಗಳಿಸ್ತಾನೆ! ಇದಕ್ಕಾಗಿ ಕ್ಯೂ ನಿಲ್ತಾರೆ ಜನ: ಇದೆಂಥ ಉದ್ಯೋಗ ನೋಡಿ...

love
Published on

ಬ್ರಿಸ್ಟಾಲ್​ (ಇಂಗ್ಲೆಂಡ್​): ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ ಇಲ್ಲೊಬ್ಬ ವ್ಯಕ್ತಿ ಜನರನ್ನು ತಬ್ಬಿಕೊಂಡೇ ಗಂಟೆಯೊಂದಕ್ಕೆ ಏಳು ಸಾವಿರ ರೂಪಾಯಿಗಳವರೆಗೂ ದುಡಿಯುತ್ತಾನೆ ಎಂದರೆ ನಂಬುವಿರಾ? ನಂಬುವುದು ಅಸಾಧ್ಯವೇ ಬಿಡಿ... ಇದೆಲ್ಲಾ ಸುಳ್ಳೆ ಸುದ್ದಿ ಎನ್ನಬಹುದು ಇಲ್ಲವೇ ಲೈಂಗಿಕ ಆಕಾಂಕ್ಷಿಗಳು ಹೀಗೆ ಮಾಡುತ್ತಿರಬಹುದು ಎಂದು ಅಂದುಕೊಳ್ಳಬಹುದು.

ಆದರೆ ಕೆಲವೊಮ್ಮೆ ಯಾರ ಊಹೆಗೂ ನಿಲುಕದ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಸಂಜಯ್​ ದತ್​ ಅಭಿನಯದ ಸೂಪರ್​ಹಿಟ್​ ಹಿಂದಿ ಚಲನಚಿತ್ರ ಮುನ್ನಾಭಾಯಿ ಎಂಬಿಬಿಎಸ್​ ನೋಡಿದವರಿಗೆ ತಬ್ಬಿಕೊಳ್ಳುವುದರಲ್ಲಿ ಇರುವ ಪ್ರೀತಿ, ಸ್ನೇಹ, ಮಮಕಾರದ ಅರಿವಾಗಿರಲಿಕ್ಕೆ ಸಾಕು. ಚಿಕ್ಕಪುಟ್ಟ ಕೆಲಸ ಮಾಡುವ ವ್ಯಕ್ತಿಯಿಂದ ಹಿಡಿದು ಅತ್ಯಂತ ಕೋಪಗೊಳ್ಳುವ ವ್ಯಕ್ತಿಯನ್ನು ಒಮ್ಮೆ ತಬ್ಬಿಕೊಂಡರೆ ಅವರಲ್ಲಿ ಆಗುವ ಬದಲಾವಣೆ ಹೇಗಿರುತ್ತದೆ ಎಂದು ಈ ಚಿತ್ರದಲ್ಲಿ ಸೂಚ್ಯವಾಗಿ ಹೇಳಲಾಗಿದೆ.

ಇದೇ ಅಪ್ಪಿಕೊಳ್ಳುವಿಕೆಗೆ ಇರುವ ಆತ್ಮೀಯತೆ. ಅಮ್ಮ ಮಗುವನ್ನು ತಬ್ಬಿಕೊಂಡಾಗ ಇರುವ ಪ್ರೀತಿ, ಸ್ನೇಹ, ಆತ್ಮೀಯ ಭಾವಕ್ಕಾಗಿಯೇ ಹಪಹಪಿಸುವವರು ಅದೆಷ್ಟೋ ಮಂದಿ. ದುಡ್ಡು ಕೊಟ್ಟರೆ ತಬ್ಬಿಕೊಂಡು ಲೈಂಗಿಕ ತೃಷೆ ತೀರಿಸುವವರು ಸಿಗುವ ಈ ಕಾಲದಲ್ಲಿಯೂ ಆತ್ಮೀಯ ಅಪ್ಪುಗೆಗಾಗಿ, ತನ್ನತನವನ್ನು ತೋರುವವರಿಗಾಗಿ ಹುಡುಕಾಟ ನಡೆಸುತ್ತಿರುವ ಜನರು ಅದೆಷ್ಟೋ ಮಂದಿ ಕಾಣಸಿಗುತ್ತಾರೆ. ಇಂಥವರಿಗಾಗಿಯೇ ಇರುವ ವ್ಯಕ್ತಿ ಇಂಗ್ಲೆಂಡ್​ನ 30 ವರ್ಷದ ಟ್ರೇವರ್​ ಹೂಟನ್. ಈತ ವೃತ್ತಿಪರ ಮುದ್ದಾಡುವಿಕೆದಾರ!

ಯಾವುದೋ ಕಾರಣಕ್ಕೆ ಜನರು ಖಿನ್ನತೆಗೆ ಜಾರಿದಾಗ, ಎಲ್ಲವೂ ಇದ್ದು ಎಲ್ಲರೂ ದೂರವಾದಾಗ, ತನಗಾಗಿ ಬದುಕುವ ಜೀವವೊಂದು ಇಲ್ಲವೇ ಎಂದು ಯಾವುದೋ ಕ್ಷಣದಲ್ಲಿ ಅನ್ನಿಸಿದವರಿಗೆ ದೈವಿ ಸ್ವರೂಪವಾಗಿ ಕಾಣುತ್ತಾನೆ ಈ ಟ್ರೇವರ್​ ಹೂಟನ್​. ಈತನ ಅಪ್ಪುವಿಕೆಯಲ್ಲಿ ಅದೆಂಥದ್ದೋ ಸಮಾಧಾನವನ್ನು ಜನರು ಕಾಣುತ್ತಾರೆ. ಇದೇ ಕಾರಣಕ್ಕೆ ಜೀವನದಲ್ಲಿ ನೊಂದು ಬೆಂದು ಹೋದವರು ಈತನ ಅಪ್ಪುವಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಾರಂತೆ. ಸತತ ಒಂದು ಗಂಟೆ ಈತ ಅಪ್ಪುವಿಕೆಯ ಮೂಲಕ ಸಮಾಧಾನ ನೀಡಿದರೆ ಆದರೆ ಏಳು ಸಾವಿರ ರೂಪಾಯಿಗಳವರೆಗೆ ಹಣವನ್ನು ನೀಡುತ್ತಿದ್ದಾರಂತೆ ಇಲ್ಲಿಯ ಜನ!

ಜನರು ಸುರಕ್ಷಿತವಾಗಿ ಮತ್ತು ಶಾಂತವಾಗಿರಲು ಸಹಾಯ ಮಾಡುವ ಒಂದು ಗಂಟೆಯ ಅವಧಿಯ ಅಪ್ಪುಗೆಗಾಗಿ 7,000 ರೂಪಾಯಿಗಳನ್ನು ಪಾವತಿಸಲು ಅವರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದಕ್ಕೆ "ಕಡ್ಲರ್ ಥೆರಪಿ" (ಅಪ್ಪುವಿಕೆಯ ಚಿಕಿತ್ಸೆ) ಎಂದು ಕರೆಯುತ್ತಾರೆ.

ಅವರ ಕೆಲಸವು ಸ್ಪರ್ಶದ ಮೂಲಕ ಯಾರಿಗಾದರೂ ಕಾಳಜಿ, ವಾತ್ಸಲ್ಯ ಮತ್ತು ಸದ್ಭಾವನೆಯನ್ನು ನೀಡುವುದು ಮಾತ್ರ. ಅವರ ಕೆಲಸವನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಕೆಲವರು ಅದನ್ನು ಲೈಂಗಿಕ ಕೆಲಸ ಎಂದು ತಪ್ಪಾಗಿ ಗ್ರಹಿಸುತ್ತಾರೆ, ಆದರೆ ಇದರಲ್ಲಿ ಲೈಂಗಿಕ ಭಾವದ ಲವಶೇಷವೂ ಇರುವುದಿಲ್ಲ. ಇಲ್ಲಿ ಇರುವುದು ಪ್ರೀತಿ, ವಾತ್ಸಲ್ಯ ಮಾತ್ರ ಎಂದು ಆತ ಹಾಗೂ ಆತನಲ್ಲಿ ಅಪ್ಪುಗೆಯ ಚಿಕಿತ್ಸೆ ಪಡೆದವರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net