

ನವದೆಹಲಿ: ಪ್ರತಿ ಹಳ್ಳಿಗಳ ಬಡ ಮಹಿಳೆಯರಿಗೂ ಸ್ಯಾನಿಟರಿ ಪ್ಯಾಡ್ ದೊರೆಯಬೇಕು. ಈ ನಿಟ್ಟಿನಲ್ಲಿ ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಳೆದ ತಿಂಗಳ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಈ ಕುರಿತು ಹಿಂದೆ ಕೂಡ ಅವರು ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದರು.
ಇದರಿಂದ ಸ್ಫೂರ್ತಿ ಪಡೆದಿರುವ ಬಿಹಾರ ಮೂಲದ ಬಿಜೆಪಿಯ ಸಂಸದ ರಾಕೇಶ್ ಸಿನ್ಹಾ ಅವರು, ಮೇಘಾಲಯದ ಕೊಂಗ್‌ತಾಂಗ್ ಮತ್ತು ಬಿಹಾರದ ಬೆಗಸುರಾಯ್ ಸಮೀಪದ ಬೈರಾಪುರ ಹಳ್ಳಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ಈ ಹಳ್ಳಿಗಳಲ್ಲಿ ಇರುವ ಸಾವಿರಾರು ಬಡ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಸೋಪ್‌ಗಳನ್ನು ಅವರು ಈಗಾಗಲೇ ಕಳುಹಿಸಿದ್ದಾರೆ.
ಕೊಂಗ್‌ತಾಂಗ್‌ನಲ್ಲಿ 97 ಕುಟುಂಬಗಳಿಗೆ, 3 ಸಾವಿರ ಸೋಪ್ ಮತ್ತು 3600 ಸ್ಯಾನಿಟರಿ ಪ್ಯಾಡ್‌ಗಳನ್ನು ಕಳುಹಿಸಿದ್ದಾರೆ. ಬೈರಾಪುರದಲ್ಲಿ 300 ಕುಟುಂಬಗಳಿಗೆ, 2 ಸಾವಿರ ಸೋಪ್‌ಗಳು ಮತ್ತು 4 ಸಾವಿರ ಸ್ಯಾನಿಟರಿ ಪ್ಯಾಡ್‌ಗಳನ್ನು ತಲುಪಿಸಿದ್ದಾರೆ.
ಈ ಕುರಿತಾಗಿ ಮೋದಿ ಅವರಿಗೆ ಸಿನ್ಹಾ ಪತ್ರ ಬರೆದಿದ್ದಾರೆ. ಅದರಲ್ಲಿ 'ನಿಮ್ಮ ಮಾತುಗಳಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಈ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವ ಎರಡು ಹಳ್ಳಿಗಳನ್ನು ದತ್ತು ಪಡೆದಿದ್ದು, ಇಲ್ಲಿಯ ಮಹಿಳೆಯರಿಗೆ ಸೋಪ್ ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಪೂರೈಸುತ್ತಿದ್ದೇನೆ’ ಎಂದಿದ್ದಾರೆ.