

ಕ್ಯಾಲಿಫೋರ್ನಿಯಾ: ಕರೊನಾ ವೈರಸ್, ಲಾಕ್‌ಡೌನ್ ಸಮಯದಲ್ಲಿ ಜನರು ಮನೆಯೊಳಕ್ಕೆ ಇದ್ದರೂ ಪ್ರಾಣಿಗಳು ರಸ್ತೆಯ ಮೇಲೆ ಎನ್‌ಜಾಯ್ ಮಾಡಿರುವ ಘಟನೆ ಹಲವಾರು ಕಡೆಗಳಲ್ಲಿ ನಡೆದಿದೆ.
ಅದೇ ರೀತಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿಯೂ ನಡೆದಿದೆ. ಬರೀ ಪ್ರಾಣಿ ರಸ್ತೆಗಿಳಿದಿದ್ದರೆ ವಿಶೇಷವೇನೂ ಆಗುತ್ತಿರಲಿಲ್ಲ. ಆದರೆ ಕರಡಿಯೊಂದು ಸೀದಾ ಸೂಪರ್‌ಮಾರ್ಕೆಟ್‌ಗೆ ನುಗ್ಗಿ ಅಲ್ಲಿ ತನಗೆ ಬೇಕಾಗಿರುವ ವಸ್ತುಗಳನ್ನು ತಿಂದು, ಮಜಾ ಉಡಾಯಿಸಿ ಹೋಗಿದೆ!
ಲಾಕ್‌ಡೌನ್ ಸಮಯದಲ್ಲಿ ಇದೇ ಕರಡಿ ಸೂಪರ್‌ಮಾರ್ಕೆಟ್ ಆಸುಪಾಸು ತಿರುಗಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಲಾಕ್‌ಡೌನ್ ಸಡಿಲಿಕೆ ನಂತರ ಸೂಪರ್‌ಮಾರ್ಕೆಟ್ ತೆರೆದಾಗ ಅದ್ಯಾವ ಮಾಯೆಯಲ್ಲಿ ಈ ಕರಡಿ ಕಿತಾಪತಿ ಮಾಡಿದೆಯೋ ಗೊತ್ತಿಲ್ಲ.
ಸೂಪರ್‌ಮಾರ್ಕೆಟ್‌ನ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಗಾಬರಿಗೊಂಡ ಸಿಬ್ಬಂದಿ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಈ ದೃಶ್ಯ ಕಂಡುಬಂದಿದೆ.
ಈ ಹಿಂದೆ ಕೂಡ ವಸ್ತುಗಳು ಸ್ವಲ್ಪ ಚೆಲ್ಲಾಪಿಲ್ಲಿಯಾಗಿದ್ದವು. ಆದರೆ ಸಿಸಿಟಿವಿಯನ್ನು ಪರಿಶೀಲಿಸಿದಾಗ, ಅದರಲ್ಲಿ ಯಾವುದೂ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಇದು ಮಾಮೂಲು ಇರಬೇಕೆಂದು ಸುಮ್ಮನಾಗಿದ್ದೆವು. ಆದರೆ ಆಗ ಕೂಡ ಈ ಕರಡಿಯೇ ಕಿತಾಪತಿ ಮಾಡಿರಬೇಕು ಎಂದು ಎನ್ನಿಸುತ್ತಿದೆ ಎಂದು ಸಿಬ್ಬಂದಿ ಹೇಳುತ್ತಾರೆ.
ಆದರೆ ತನಗೆ ಬೇಕಾದದ್ದನ್ನು ತಿಂದು, ಯಾರ ತಂಟೆಗೂ ಬರದೇ ಕರಡಿ ಹೋಗುತ್ತಿರುವುದಾಗಿ ಅವರು ಹೇಳಿದ್ದಾರೆ. ಸೂಪರ್‌ಮಾರ್ಕೆಟ್ ತೆರೆದಾಗ ಕರಡಿ ಯಾರೂ ಇಲ್ಲದ ಒಂದು ಭಾಗದಿಂದ ಒಳಕ್ಕೆ ನುಸುಳುವುದು ಕೂಡ ಸಿಸಿಟಿಯಲ್ಲಿ ಕಂಡುಬಂದಿದೆ.