'ಮಹಿಳೆಯರ ಸ್ಥಾನ ಎತ್ತರಕ್ಕೆ ಒಯ್ದ ಸೋನಿಯಾ ಗಾಂಧಿ, ಮಾಯಾವತಿಗೆ ಸಿಗಲಿ ಭಾರತ ರತ್ನ'

bharataratna
Published on

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಹುಜನ್​ ಸಮಾಜ್​ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಇಬ್ಬರೂ ಭಾರತ ರತ್ನ ಪ್ರಶಸ್ತಿಗೆ ಅರ್ಹರು ಎಂದಿರುವ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಇವರಿಗೆ ಈ ಗೌರವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಸೋನಿಯಾ ಗಾಂಧಿ ಮತ್ತು ಮಾಯಾವತಿ ಅವರು ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಭಾರತ ರತ್ನಕ್ಕೆ ಅರ್ಹರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾವತ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಈ ಇಬ್ಬರೂ ಮಹಿಳಾ ಸಬಲೀಕರಣ ಮತ್ತು ಸಾರ್ವಜನಿಕ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಟ್ವೀಟ್​ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್​ ಮಾಡಿರುವ ರಾವತ್​, 'ನೀವು ಅವರ ರಾಜಕೀಯವನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು ಆದರೆ ಸೋನಿಯಾಜಿಯವರ ಘನತೆ, ಸಾಮಾಜಿಕ ಕಳಕಳಿ ಬಹುಮುಖ್ಯವಾದದ್ದು. ಭಾರತೀಯ ಮಹಿಳೆಯರ ಸ್ಥಾನವನ್ನು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ ಈ ಇಬ್ಬರು. ಅದನ್ನು ನೀವು ತಳ್ಳಿಹಾಕುವಂತಿಲ್ಲ" ಎಂದಿದ್ದಾರೆ.

ಮಾಯಾವತಿಯವರು ಹಲವಾರು ವರ್ಷಗಳಿಂದ ಶೋಷಿತ ಮತ್ತು ಕೆಳವರ್ಗದ ಜನರ ಪರವಾಗಿದ್ದು ಅವರಲ್ಲಿ ವಿಶ್ವಾಸ ಮೂಡಿಸಿದ್ದಾರೆ ಎಂದಿರುವ ಮಾಜಿ ಮುಖ್ಯಮಂತ್ರಿ, ಇಬ್ಬರಿಗೂ ಭಾರತ ರತ್ನ ನೀಡುವಂತೆ ಒತ್ತಾಯ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net