'ಬೇಟಿ ಬಚಾವೋ' ಯೋಜನೆ ಅಡಿ ಎರಡು ಲಕ್ಷ ರೂಪಾಯಿ ಸಿಗತ್ತಾ?

beti bachavo
Published on

ನವದೆಹಲಿ: ಇತ್ತೀಚೆಗಂತೂ ಫೇಕ್​ ಸುದ್ದಿಗಳ ಭರಾಟೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಸಾಗುತ್ತದೆ. ಯಾವುದೋ ಒಂದು ಸುದ್ದಿ ಎಲ್ಲಿಯೋ ಬಂತೆಂದರೆ ಸಾಕು, ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡದೇ ಫಾರ್ವರ್ಡ್​ ಮಾಡಲಾಗುತ್ತದೆ.

ಇದರಿಂದ ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗುತ್ತಿದೆ. ಅಂಥದ್ದೇ ಒಂದು ಸುದ್ದಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಬಗ್ಗೆ ಇದೀಗ ಹರಿದಾಡುತ್ತಿದೆ.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುರು ಮಾಡಿರುವ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಹೆಣ್ಣುಮಕ್ಕಳಿಗೆ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿದಾಡುತ್ತಿದೆ.

ಇದನ್ನು ನಿಜವೆಂದೇ ನಂಬಿರುವ ಹಲವರು ಸಂದೇಶಗಳನ್ನು ಶೇರ್​ ಮಾಡುತ್ತಲೇ ಸಾಗಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳುಸುದ್ದಿಯಾಗಿದ್ದು, ಇಂಥ ಯಾವುದೇ ಯೋಜನೆ ಸರ್ಕಾರದಿಂದ ಜಾರಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ.

ಈ ಸುದ್ದಿ ನಕಲಿ ಎಂದು ಟ್ವೀಟ್ ಮೂಲಕ ಪಿಐಬಿ ಮಾಹಿತಿ ನೀಡಿದೆ. ಇದು ಸುಳ್ಳು ಸುದ್ದಿ. ಈ ಯೋಜನೆಯಡಿ ಯಾವುದೇ ನಗದು ಪ್ರೋತ್ಸಾಹವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಯಾವುದಾದರೂ ಸುದ್ದಿ ಅಸಲಿಯೋ, ನಕಲಿಯೋ ಎಂದು ತಿಳಿಯಲು ಅದರ ಸ್ಕ್ರೀನ್‌ಶಾಟ್, ಟ್ವೀಟ್, ಫೇಸ್‌ಬುಕ್ ಪೋಸ್ಟ್ ಅಥವಾ ಯುಆರ್‌ಎಲ್ ನಕಲಿ ಮೂಲಕ ಪಿಐಬಿ ಫ್ಯಾಕ್ಟ್ ಚೆಕ್‌ ವಾಟ್ಸಾಪ್ ಸಂಖ್ಯೆ 918799711259 ಗೆ ಕಳುಹಿಸಬಹುದು ಎಂದು ಅದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net