

ಪ್ರಕಾಶಂ (ಆಂಧ್ರಪ್ರದೇಶ): ಲಾಕ್‌ಡೌನ್ ಎಷ್ಟೋ ಮಂದಿ ಜೀವನದಲ್ಲಿ ಏನೆಲ್ಲಾ ಬದಲಾವಣೆ ತಂದುಬಿಟ್ಟಿದೆ. ಹಲವರಿಗೆ ಈ ಅವಧಿ ಅಕ್ಷರಶಃ ನರಕಯಾತನೆಯಾಗಿದ್ದರೆ, ಇನ್ನು ಕೆಲವರು ಇದೇ ವೇಳೆಯನ್ನು ಸದುಪಯೋಗಪಡಿಸಿಕೊಂಡಿದ್ದೂ ಇದೆ.
ಅದೇನೇ ಇರಲಿ. ಇಲ್ಲಿ ಹೇಳಹೊರಟಿರುವುದು ಮಾತ್ರ ಲಾಕ್‌ಡೌನ್‌ನಿಂದ ಉಂಟಾಗಿರುವ ವಿಚಿತ್ರ ಘಟನೆಗಳು. ಲಾಕ್‌ಡೌನ್ ಇದ್ದ ಸಂದರ್ಭದಲ್ಲಿ ಸುಮಾರು ಎರಡು ತಿಂಗಳು ಮದ್ಯದಂಗಡಿ ತೆರೆದಿರಲಿಲ್ಲ. ಈ ಸಂದರ್ಭದಲ್ಲಿ ಆಲ್ಕೋಹಾಲ್‌ಯುಕ್ತ ಸ್ಯಾನಿಟೈಸರ್ ಸೇವನೆ ಮಾಡಿದವರು ಹಲವು ಕುಡುಕರು.
ಈ ಪೈಕಿ ಕೆಲವರು ಜೀವವನ್ನು ಕಳೆದುಕೊಂಡಿರುವುದು ವರದಿಯಾಗಿದೆ. ಇದೀಗ ವಿಚಿತ್ರ ಎಂದರೆ, ಲಾಕ್‌ಡೌನ್ ತೆರವಾಗಿ ಬಹುತೇಕ ರಾಜ್ಯಗಳಲ್ಲಿ ಮದ್ಯದಂಗಡಿಗಳು ಎಂದಿನಂತೆ ಕಾರ್ಯ ಆರಂಭಿಸುತ್ತಿವೆ. ಆದರೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುಡುಕರು ಮಾತ್ರ ಇನ್ನೂ ಸ್ಯಾನಿಟೈಸರ್ ದಾಸರಾಗಿಬಿಟ್ಟಿದ್ದಾರೆ!
ಈ ಬಗ್ಗೆ ಇದೀಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಸ್ಯಾನಿಟೈಸರ್ ಸೇವಿಸಿ ಒಂದೇ ವಾರದಲ್ಲಿ ಪ್ರಕಾಶಂ ಜಿಲ್ಲೆಯ ಕುರಿಚೆಡು ಮಂಡಲದಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಈ ಜಿಲ್ಲೆಯೊಂದರಲ್ಲಿಯೇ ತನಿಖೆ ಕೈಗೊಂಡಾಗ 300ಕ್ಕೂ ಅಧಿಕ ಕುಡುಕರು ಸ್ಯಾನಿಟೈಸರ್ ವ್ಯಸನಿಗಳಾಗಿರುವುದು ತಿಳಿದುಬಂದಿದೆ.
ಕುರಿಚೆಡು, ದರ್ಸಿ ಮತ್ತು ವಿನುಕೊಂಡ ಮಂಡಲಗಳಲ್ಲಿನ ಹೆಚ್ಚಿನ ಪ್ರದೇಶಗಳಲ್ಲಿ ಸ್ಯಾನಿಟೈಸರ್‌ಗೆ ವ್ಯಸನಿಗಳಾಗಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈ ಪ್ರದೇಶಗಳಲ್ಲಿನ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಆದರೆ ದೂರದ ಅಂಗಡಿಗಳು ತೆರೆದಿದ್ದರೂ ಇವರೆಲ್ಲರೂ ಸ್ಯಾನಿಟೈಸರ್ ಮೊರೆ ಹೋಗುತ್ತಿದ್ದಾರೆ ಎಂದು ಎಸ್‌ಪಿ ಸಿದ್ಧಾರ್ಥ್ ಕೌಶಲ್ ಆತಂಕದಿಂದ ನುಡಿಯುತ್ತಾರೆ.
ಸ್ಯಾನಿಟೈಸರ್ ಇದೀಗ ಕೆಲವು ಗ್ರಾಮಗಳಲ್ಲಿ ಸುಲಭವಾಗಿ ಸಿಗುತ್ತಿವೆ. ಸುಲಭದಲ್ಲಿ ಸಿಗದಿದ್ದರೂ ದೂರದಿಂದ ಇವುಗಳನ್ನು ತರಿಸಿಕೊಳ್ಳಲಾಗುತ್ತಿದೆ. ಇದರಿಂದ ಆತಂಕ ಹೆಚ್ಚಾಗಿ. ಮದ್ಯ ಸೇವಿಸಿ ಸಾಯುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಯಾನಿಟೈಸರ್ ಸೇವಿಸಿ ಸಾಯುತ್ತಿದ್ದಾರೆ. ಇಲ್ಲಿರುವ ಒಬ್ಬ ಭಿಕ್ಷುಕ ಇಷ್ಟೆಲ್ಲಾ ಆವಾಂತರ ಸೃಷ್ಟಿ ಮಾಡಿದ್ದಾನೆ. ಮದ್ಯದಂಗಡಿ ಬಂದ್ ಆಗಿದ್ದರಿಂದ ಸ್ಯಾನಿಟೈಸರ್ ಕುಡಿಯಿರಿ ಎಂದು ಹೇಳಿ ಚಟ ಹತ್ತಿಸಿದ್ದಾನೆ ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ಜುಲೈ 29 ರಂದು ಗುಂಟೂರಿನಿಂದ ಅವರನ್ನು ಭೇಟಿ ಮಾಡಲು ಬಂದಿದ್ದ ಕೆಲವು ಸಂಬಂಧಿಕರಿಗಾಗಿ ಕೆಲವರು ಸ್ಯಾನಿಟೈಸರ್ ಪಾರ್ಟಿ ಆಯೋಜಿಸಿದ್ದರು. ಅವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇವರು ನೀರು ಅಥವಾ ತಂಪು ಪಾನೀಯಗಳೊಂದಿಗೆ ಬೆರೆಸಿದ ಬಹಳಷ್ಟು ಸ್ಯಾನಿಟೈಸರ್ ಅನ್ನು ಸೇವಿಸಿದ್ದಾರೆ ”ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ರೀತಿ ಟ್ರೆಂಡ್ ಇಲ್ಲಿ ಶುರುವಾಗಿಬಿಟ್ಟಿದೆ. ಮದ್ಯಕ್ಕಿಂತ ಕಡಿಮೆ ದರದಲ್ಲಿ ಸ್ಯಾನಿಟೈಸರ್ ಮಾರಾಟ ಕೂಡ ನಡೆಯುತ್ತಿರುವುದು ಇದಕ್ಕೆ ಕಾರಣ ಎಂದಿದ್ದಾರೆ.
ಇಲ್ಲಿರುವವರಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.