ಟಿಕ್‌ಟಾಕ್‌ ಮಾರಾಟಕ್ಕೆ ಗಡುವು- ಇಲ್ಲದಿದ್ದರೆ ಬ್ಯಾನ್‌: ಟ್ರಂಪ್‌ ಖಡಕ್ ವಾರ್ನಿಂಗ್‌

tiktok
Published on

ವಾಷಿಂಗ್ಟನ್: ಟಿಕ್‌ ಟಾಕ್‌ ಆ್ಯಪ್‌ ಅನ್ನು ಭಾರತ ಸೇರಿದಂತೆ ಕೆಲವು ದೇಶಗಳು ಬ್ಯಾನ್‌ ಮಾಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿರುವ ಚೀನಾ ಇದೀಗ ತಲೆತಲೆ ಚಚ್ಚಿಕೊಳ್ಳುತ್ತಿದೆ.

ತನ್ನ ದೇಶದ ಹೆಸರಿನಲ್ಲಿರುವ ಈ ಆ್ಯಪ್‌ ಖರೀದಿಗೆ ಬೇರೆ ದೇಶಗಳು ಅದರಲ್ಲಿಯೂ ಭಾರತ ಮುಂದಾಗುವುದಿಲ್ಲ ಎಂದು ತಿಳಿಯುತ್ತಲೇ ಈ ಆ್ಯಪ್‌ನ ಮಾಲೀಕರಾಗಿರುವ ಬೈಟ್‌ಡಾನ್ಸ್‌ ಕಂಪೆನಿ, ಈ ಆ್ಯಪ್‌ ಮಾಲೀಕತ್ವವನ್ನು ಅಮೆರಿಕಕ್ಕೆ ವರ್ಗಾವಣೆ ಮಾಡಲು ಬಯಸಿದ್ದು, ಈ ಸಂಬಂಧ ಅಮೆರಿಕ ಜತೆ ಮಾತುಕತೆ ಕೂಡ ನಡೆಸಿದೆ.

ಈ ಮಾತುಕತೆ ನಡೆಯುತ್ತಿರುವ ಮಧ್ಯೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚೀನಾದ ತಲೆಯ ಮೇಲೆ ಹೊಡೆದಿರುವಂಥ ಮಾತನ್ನು ಹೇಳಿದ್ದಾರೆ. ಅದೇನೆಂದರೆ ಒಂದು ವೇಳೆ ಮಾರಾಟ ಮಾಡುವುದು ಹೌದಾಗಿದ್ದರೆ, ಸೆಪ್ಟೆಂಬರ್ 15ರೊಳಗಾಗಿ ಮಾರಾಟ ಮಾಡಿ. ಇಲ್ಲದೇ ಹೋದರೆ ಅಮೆರಿಕದಲ್ಲಿ ಟಿಕ್ ಟಾಕ್ ಆ್ಯಪನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಟ್ರಂಪ್‌, ನಾನು ಈಗಾಗಲೇ ಟಿಕ್ ಟಾಕ್ ಆ್ಯಪ್‌ಗೆ ಗಡುವು ನೀಡಿದ್ದೇನೆ. ಗಡುವಿನೊಳಗೆ ಟಿಕ್ ಟಾಕ್ ಆ್ಯಪ್ ಮಾರಾಟವಾಗದೇ ಹೋದಲ್ಲಿ, ಆ್ಯಪ್ ಸಂಪೂರ್ಣವಾಗಿ ಸ್ಥಗಿತಗೊಳಸಲಾಗುತ್ತದೆ ಎಂದಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಭದ್ರೆತೆಗೆ ಧಕ್ಕೆ ತರುತ್ತಿದೆ ಎಂದು ಟ್ರಂಪ್ ಪತ್ರಿಕಾಗೋಷ್ಟಿಯಲ್ಲಿ ಟಿಕ್ ಟಾಕ್ ನಿಷೇಧಿಸುವ ಕುರಿತಾಗಿ ಮಾತುಕತೆ ನಡೆಸಿದ್ದರು. ಆದರೆ ಜಾಗತಿಕವಾಗಿ 2 ಶತಕೋಟಿಗಿಂತ ಹೆಚ್ಚು ಬಳಕೆದಾರರು ಟಿಕ್‌ ಟಾಕ್‌ ಅಪ್ಲಿಕೇಶನ್‌ನಲ್ಲಿ ಸಕ್ರೀಯರಾಗಿದ್ದು ಚೀನಾದ ಕಂಪೆನಿ ಶತಕೋಟಿ ವ್ಯವಹಾರ ಮಾಡುವ ಟಿಕ್‌ಟಾಕ್‌ ಅನ್ನು ಅಮೆರಿಕ ಮೂಲದ ಮೈಕ್ರೋಸಾಫ್ಟ್ ಖರೀದಿ ಮಾಡಲು ಆಸಕ್ತಿ ತೋರಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net