ಅರ್ಧ ತಿಂದ ಸಾಂಬಾರಿನಲ್ಲಿತ್ತು ಅರ್ಧ ಹಲ್ಲಿ- ಉಳಿದದ್ದು ಹೋದದ್ದೆಲ್ಲಿ? ದಾಖಲಾಯ್ತು ಎಫ್‌ಐಆರ್‌

halli
Published on

ನವದೆಹಲಿ: ಹೋಟೆಲ್‌ಗಳಲ್ಲಿ ಹಲ್ಲಿ, ಜಿರಳೆ, ಹುಳಗಳು ಸಿಕ್ಕು ಗಲಾಟೆಗಳಾಗುವುದು ಸಹಜ. ಚೀನಾ ಹೊರತುಪಡಿಸಿ ಬಹುಶಃ ಉಳಿದ ಯಾವುದೇ ದೇಶಗಳಲ್ಲಿ ಇವುಗಳನ್ನು ಊಟದ ಪ್ಲೇಟ್‌ನಲ್ಲಿ ಕಂಡರೆ ವಾಂತಿ ಬರಿಸುವುದಂತೂ ನಿಜ.

ಆದರೆ ಅರ್ಧ ಊಟ ಮಾಡಿದ ಬಳಿಕ, ಹಲ್ಲಿಯ ಅರ್ಧ ದೇಹ ಊಟದ ಪ್ಲೇಟ್‌ನಲ್ಲಿ ಕಂಡರೆ ಹೇಗಿರುತ್ತೆ? ನೆನೆಸಿಕೊಂಡರೆ ಮೈ ಝುಂ ಎನ್ನುತ್ತದೆಯಲ್ಲವೆ?
ಆದರೆ ದೆಹಲಿಯ ರೆಸ್ಟೋರೆಂಟ್‌ ಒಂದಕ್ಕೆ ಹೋಗಿದ್ದ ಪಂಕಜ್‌ ಅಗರ್‌ವಾಲ್‌ ಎನ್ನುವವರಿಗೆ ಇದೇ ರೀತಿ ಆಗಿದ್ದು, ಹೋಟೆಲ್‌ ವಿರುದ್ಧ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯ ದೆಹಲಿಯ ಕೊನಾಟ್ ಪ್ಲೇಸ್‌ನ ಪ್ರಸಿದ್ಧ ರೆಸ್ಟೋರೆಂಟ್‌ ಒಂದಕ್ಕೆ ಸ್ನೇಹಿತರ ಗುಂಪು ಅಲ್ಲಿಯ ಪ್ರಸಿದ್ಧ ಸಾಂಬಾರ್-ದೋಸೆಗೆ ಆರ್ಡರ್‌ ಮಾಡಿದೆ. ಐಷಾರಾಮಿ ಹೋಟೆಲ್‌ಗಳು, ಉನ್ನತ ಮಟ್ಟದ ತಿನಿಸುಗಳು ಮತ್ತು ಶಾಪಿಂಗ್ ಸಂಕೀರ್ಣಗಳಿಗೆ ಹೆಸರುವಾಸಿಯಾದ ಕಟ್ಟಡದಲ್ಲಿರುವ ಐಷಾರಾಮಿ ಹೋಟೆಲ್‌ ಇದು.

ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಗೆ ಇನ್ನು ಭೇಟಿಕೊಡಬೇಕಾಗಿಲ್ಲ…

ದೋಸೆ-ಸಾಂಬಾರ್‌ ತಿಂದ ಮೇಲೆ ಸಾಂಬಾರ್‌ ಬೌಲ್‌ನಲ್ಲಿ ಹಲ್ಲಿಯ ಅರ್ಧ ದೇಹ ಕಂಡು ಹೌಹಾರಿ ಹೋಗಿದ್ದಾರೆ. ಪಂಕಜ್‌ ಅವರ ಸಾಂಬಾರ್‌ನಲ್ಲಿ ಇದು ಕಾಣಿಸಿಕೊಂಡಿದೆ. ಹೋಟೆಲ್‌ ಸಿಬ್ಬಂದಿಯನ್ನು ಕರೆದು ಅದನ್ನು ತೋರಿಸಿದಾಗ ಅವರು ಸಾರಿ ಕೇಳಿದ್ದಾರೆ. ಆದರೆ ಸಾರಿ ಕೇಳಿಬಿಟ್ಟರೆ ಮುಗಿಯಿತೆ? ಇನ್ನರ್ಧ ದೇಹ ಎಲ್ಲಿ ಹೋಗಿದೆ ಎನ್ನುವುದು ಈ ಸ್ನೇಹಿತರನ್ನು ಇನ್ನಿಲ್ಲದಂತೆ ಕಾಡಿದೆ. ಅರ್ಧ ತಿಂಡಿ ತಿಂದಾಗಿದೆ. ಇನ್ನರ್ಧ ದೇಹವನ್ನು ತಾವು ತಿಂದಿದ್ದೇವೆಯೇ ಅಥವಾ ಅದು ಬೇರೆಲ್ಲೋ ಹೋಗಿದೆಯೇ ಎಂಬುದನ್ನು ಅರಿಯದೇ ಎಲ್ಲರೂ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ.

ಪೊಲೀಸರಿಗೆ ಈ ಹೋಟೆಲ್‌ ವಿರುದ್ಧ ದೂರು ನೀಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಸ್ನೇಹಿತರು ಹಂಚಿಕೊಂಡಿದ್ದಾರೆ. ಇನ್ನರ್ಧ ಹಲ್ಲಿ ಎಲ್ಲಿ ಹೋಯಿತು ಎಂದು ಹೋಟೆಲ್‌ ಸಿಬ್ಬಂದಿ ತಲೆಕೆಡಿಸಿಕೊಳ್ಳುತ್ತಿದ್ದಾರೆ! ಹೋಟೆಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net