ಬೆಂಗಳೂರಿನಲ್ಲಿ ಇಂಜಿನಿಯರ್‌: ಈತ ಸ್ಯೂಸೈಡ್‌ ಬಾಂಬರ್‌- ಲಿಬಿಯಾದಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಸಾವು

terror
ಸಾಂದರ್ಭಿಕ ಚಿತ್ರ
Published on

ತಿರುವನಂತಪುರ: ಬೆಂಗಳೂರಿನಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡಿಕೊಂಡಿದ್ದ ಕೇರಳದ ವ್ಯಕ್ತಿಯೊಬ್ಬ ಲಿಬಿಯಾದಲ್ಲಿ ಆತ್ಮಹತ್ಯಾ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದ್ದು, ಈ ಕುರಿತು ಉಗ್ರ ಸಂಘಟನೆಯೇ ತನ್ನ ದಾಖಲೆಯಲ್ಲಿ ಹೇಳಿಕೊಂಡಿದೆ.

ಕೇರಳದ ಕಲ್ಲಿಕೋಟೆ ನಿವಾಸಿ ಅಬು ಬಕರ್‌ ಎಂಬಾತ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡಿಕೊಂಡಿದ್ದ. ಮೂಲತಃ ಕ್ರೈಸ್ತ ಧರ್ಮಕ್ಕೆ ಸೇರಿರುವ ಈತ ಬೆಂಗಳೂರಿನಿಂದ ದುಬೈಗೆ ಹೋಗಿದ್ದ. ನಂತರ ಲಿಬಿಯಾದಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಈ ಕುರಿತು ಉಗ್ರ ಸಂಘಟನೆ ಐಎಸ್‌ ವಿಷಯ ತಿಳಿಸಿದ್ದು, ‘ಭಾರತದ ಒಬ್ಬ ಮೃತಪಟ್ಟಿದ್ದಾನೆ. ಈತ ಹುತಾತ್ಮ ಎಂದು ನೀವು ತಿಳಿದುಕೊಳ್ಳಬೇಕು’ ಎಂದು ಹೇಳಿದೆ. ಇದರ ಮೂಲ ಅರಸಿ ಹೋದಾಗ ಆತ ಬೆಂಗಳೂರಿನಲ್ಲಿ ಇಂಜಿನಿಯರ್‌ ಆಗಿದ್ದ ಅಬು ಬಕರ್‌ ಎಂದು ತಿಳಿದುಬಂದಿದೆ. ಈ ಬಗ್ಗೆ ಉಗ್ರ ಸಂಘಟನೆ ಹೇಳಿದ್ದೇನೆಂದರೆ, ಪಾಸ್‌ಪೋರ್ಟ್‌ನಲ್ಲಿ ಈತನದ್ದು ಕ್ರೈಸ್ತ ಹೆಸರು ಇತ್ತು. ಆದ್ದರಿಂದ ಲಿಬಿಯಾಕ್ಕೆ ತೆರಳಲು ಸೂಚಿಸಲಾಗಿತ್ತು. 3 ತಿಂಗಳ ಬಳಿಕ ಆತ ಹುತಾತ್ಮನಾಗಿದ್ದಾನೆ ಎಂದಿದೆ.

ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ. ಬೆಂಗಳೂರು ಉಗ್ರರ ನೆಲೆಯಾಗುತ್ತಿದೆ ಎಂಬ ಬಗ್ಗೆ ಬಹಳ ಹಿಂದಿನಿಂದಲೂ ಕೇಳಿಬರುತ್ತಿರುವುದು ಮಾತ್ರವಲ್ಲದೇ, ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಉಗ್ರ ಸಂಘಟನೆ ಜತೆ ಗುರುತಿಸಿಕೊಂಡಿರುವವರು ಉನ್ನತ ಹುದ್ದೆಯನ್ನೇರಿ ಕುಳಿತುಕೊಂಡಿರುವ ಕೆಲವು ಘಟನೆಗಳೂ ಬೆಳಕಿಗೆ ಬಂದ ಬೆನ್ನಲ್ಲೇ ಈ ವಿಷಯವೂ ಬಹಿರಂಗಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net