ವಿಶ್ವದ ಹಿರಿಯ ಮಹಿಳೆ ಬಚನ್‌ ಕೌರ್‌ ನಿಧನ: ಅನಾರೋಗ್ಯಮುಕ್ತರಾಗಿದ್ದ ಇವರ ಬದುಕಿನ ಕಥೆಯೇ ರೋಚಕ

kaur
Published on

ಮೊಹಾಲಿ: ಜಗತ್ತಿನಲ್ಲಿ ಅದೆಷ್ಟೋ ಮಂದಿ ಶತಾಯಿಷಿಗಳು ಇದ್ದಾರೆ. ಹೆಚ್ಚಿನವರು ಸುದ್ದಿಯಾಗುವುದೂ ಇಲ್ಲ, ಅವರ ವಯಸ್ಸು ಲೆಕ್ಕಕ್ಕೂ ಸಿಗುವುದಿಲ್ಲ. ಒಂದೊಂದು ದಾಖಲೆಯಲ್ಲಿ ಒಬ್ಬೊಬ್ಬರ ಹೆಸರು ಉಲ್ಲೇಖವಾಗಿರುತ್ತದೆ. ಆದರೆ ಸದ್ಯ ಒಂದು ದಾಖಲೆಯ ಪ್ರಕಾರ ಪಂಜಾಬ‌ನ ಮೊಹಾಲಿಯ ಬಚನ್‌ ಕೌರ್‌ ಎನ್ನುವವರು ವಿಶ್ವದ ಹಿರಿಯ ಮಹಿಳೆಯ ಸಾಲಿಗೆ ಸೇರಿದ್ದರು. ಇವರ ವಯಸ್ಸು 119 ವರ್ಷ. ಇವರು ನಿನ್ನೆ ಮೃತಪಟ್ಟಿದ್ದಾರೆ.

ಇವರು ವಿಶ್ವದ ಹಿರಿಯ ಮಹಿಳೆ ಹೌದೋ, ಅಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗದಿದ್ದರೂ ಮಿಲಿಟರಿಯ ಪಿಂಚಣಿ ಪಡೆಯುತ್ತಿರುವ ಅತ್ಯಂತ ಹಿರಿಯ ಮಹಿಳೆ ಎಂದು ವಿಶ್ವ ದಾಖಲೆಯ ಪುಸ್ತಕದಲ್ಲಿ ಉಲ್ಲೇಖವಾಗಿದೆ.

ಮೊಹಾಲಿ ಜಿಲ್ಲೆಯ ಮೋಟೆ ಮಜ್ರಾ ಗ್ರಾಮದವರಾದ ಕೌರ್ ಅವರ ಬದುಕು ಹಲವಾರು ರೋಚಕತೆಗಳಿಂದ ಕೂಡಿದೆ. ಬಚನ್ ಕೌರ್ ಯಾವುದೇ ಕಾಯಿಲೆ ಅಥವಾ ಔಷಧಿ ಇಲ್ಲದೆ ಆರೋಗ್ಯಕರ ಜೀವನವನ್ನು ನಡೆಸಿರುವುದಾಗಿ ಅವರ ಸಂಬಂಧಿಕರು ಹೇಳುತ್ತಾರೆ. ಹಾಲು ತುಪ್ಪ ಎಂದರೆ ತುಂಬಾ ಪ್ರೀತಿಸುತ್ತಿದ್ದ ಕೌರ್‌, ಕೊನೆಯ ಕ್ಷಣದವರೆಗೂ ಪಂಜಾಬಿ ಆಹಾರವನ್ನಲ್ಲದೇ ಬೇರೆನೂ ಮುಟ್ಟುತ್ತಿರಲಿಲ್ಲ. ಅದೇ ಅವರ ಆರೋಗ್ಯದ ಗುಟ್ಟು ಎನ್ನುತ್ತಾರೆ ಬಲ್ಲವರು. ಅಷ್ಟೇ ಅಲ್ಲದೇ ಇವರಿಗೆ ಬಿಪಿ, ಶುಗರ್‌ ಕೂಡ ಇರಲಿಲ್ಲವಂತೆ. ಕೊನೆಯ ಕ್ಷಣದವರೆಗೂ ಹೊಲ, ಗದ್ದೆಗಳಲ್ಲಿ ಓಡಾಡುತ್ತಿದ್ದರು.

ಇವರ ಪತಿ ಗನ್ನರ್ ಜಿವಾನ್ ಕೂಡ ಶತಾಯುಷಿಯಾಗಿದ್ದರು. 101ನೇ ವಯಸ್ಸಿನಲ್ಲಿ ಅಂದರೆ 1991ರಲ್ಲಿ ಮೃತಪಟ್ಟಿದ್ದರು. ಇವರು ಅವರ ಪತಿ ಬ್ರಿಟಿಷ್ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಎರಡು ಮಹಾಯುದ್ಧಗಳಲ್ಲಿ ಹೋರಾಡಿದ್ದರು. ಭಾರತೀಯ ಸಶಸ್ತ್ರ ಪಡೆಗಳ ಅತ್ಯಂತ ಹಿರಿಯ ಕುಟುಂಬ ಪಿಂಚಣಿದಾರರಾಗಿದ್ದರು ಇವರು. ಬ್ರಿಟಿಷ್ ಆಳ್ವಿಕೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿರುವುದರಿಂದ ಕುಟುಂಬ ಪಿಂಚಣಿ ಪಡೆಯುತ್ತಿತ್ತು ಈ ಕುಟುಂಬ.

ಇವರಿಗೆ ಒಂಬತ್ತು ಮಕ್ಕಳಿದ್ದರು. ಆ ಪೈಕಿ ಮೂವರು ಹೆಣ್ಣುಮಕ್ಕಳು ಮತ್ತು ಇಬ್ಬರು ಪುತ್ರರನ್ನು ಹೊರತುಪಡಿಸಿ ಉಳಿದವರು ಕೊನೆಯುಸಿರೆಳೆದಿದ್ದಾರೆ. ಹಿರಿಯ ಮಗಳು ಪ್ರೀತಮ್ ಕೌರ್‌ಗೆ 87 ವರ್ಷ, ಹಿರಿಯ ಮಗ ಪ್ರೀತಮ್ ಸಿಂಗ್ 79 ವರ್ಷ ವಯಸ್ಸು. ಪ್ರೀತಮ್ ಸಿಂಗ್ ಸೈನ್ಯದಲ್ಲಿ ಸುಬೇದಾರರಾಗಿದ್ದಾರೆ. ಬಚನ್ ಕೌರ್ ಅವರ ಮೊಮ್ಮಗ ಬಾಬ್ ಸಿಂಗ್ ಕೂಡ 2 ವರ್ಷಗಳ ಹಿಂದೆ ಭಾರತೀಯ ಸೇನೆಯಿಂದ ನಿವೃತ್ತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net