

ಲಖನೌ: ಪಕ್ಕದ ಮನೆಯ ಮಹಿಳೆಯ ಗಂಡ ಊರಿನಲ್ಲಿ ಇಲ್ಲದ ವೇಳೆ ಆಕೆಯ ಮನೆಗೆ ನುಗ್ಗಿದ ಕಿರಾತಕನೊಬ್ಬ ಆ್ಯಸಿಡ್ ಎರೆಚಿ, ಚಾಕುವಿನಿಂದ ಇರಿದು ವಿಕೃತಿ ಮೆರೆದಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಸಕ್ರಿ ಗ್ರಾಮದಲ್ಲಿ ನಡೆದಿದೆ.
ಸತೇಂದರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಪಕ್ಕದ ಮನೆಗೆ ಹೋಗಿರುವ ಈತ ಅಲ್ಲಿ ಮೂರು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ಒಂಟಿಯಾಗಿ ಇರುವುದನ್ನು ನೋಡಿದ್ದಾನೆ. ಆಕೆಗೆ ಲೈಂಗಿಕ ಕ್ರಿಯೆ ಬರುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ಪ್ರತಿರೋಧ ಒಡ್ಡಿದಾಗ ಆ್ಯಸಿಡ್ ಸುರಿದು ಹಲ್ಲೆ ಮಾಡಿದ್ದಾನೆ. ಇಷ್ಟು ಸಾಲದು ಎಂಬಂತೆ ಮಹಿಳೆ ಚೀರಾಡುತ್ತಿದ್ದಾಗಲೇ ಚಾಕು ಹಾಕಿ ಇರಿದಿದ್ದಾನೆ.
ಮಹಿಳೆ ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದಾಗ ಆ್ಯಸಿಡ್ ಹಾಗೂ ರಕ್ತದಿಂದಾಗಿ ಮಹಿಳೆ ಸಾವುಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ.
ಮಹಿಳೆ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರ ಗಂಡ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಮಕ್ಕಳ ಜತೆ ಒಂಟಿಯಾಗಿ ವಾಸವಿದ್ದಾರೆ. ಇದನ್ನು ನೋಡಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದಿರುವ ಪೊಲೀಸರು ಆತನ್ನು ಬಂಧಿಸಿದ್ದಾರೆ.