ನಿರ್ಮಾಪಕಿ ಏಕ್ತಾ ಕಪೂರ್​ಗೆ ಶಾಕ್​ ಕೊಟ್ಟ 'XXX' : ತಾಯಿ-ಮಗಳಿಗೆ ಅರೆಸ್ಟ್​ ವಾರೆಂಟ್​ ಜಾರಿ

ektha
Published on

ಮುಂಬೈ: ಕಿರುತೆರೆ, ಒಟಿಟಿ ಮತ್ತು ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್​ಗೆ ಈಗ ಬಂಧನದ ಭೀತಿ ಎದುರಾಗಿದೆ. 'XXX' ವೆಬ್ ಸರಣಿಯ ಎರಡನೇ ಸೀಸನ್‍ನಲ್ಲಿ ಹಲವಾರು ದೃಶ್ಯಗಳಲ್ಲಿ ಸೈನಿಕರನ್ನು ಮತ್ತು ಅವರ ಕುಟುಂಬದವರನ್ನು ಅವಮಾನಿಸಿದ್ದಾರೆ ಎನ್ನುವ ಕಾರಣಕ್ಕೆ ಇವರ ವಿರುದ್ಧ ಅರೆಸ್ಟ್​ ವಾರೆಂಟ್​ ಹೊರಡಿಸಲಾಗಿದೆ.

ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಒಡೆತನದ ಒಟಿಟಿ ಪ್ಲಾಟ್‍ಫಾರ್ಮ್ ಎಎಲ್‍ಟಿ ಬಾಲಾಜಿಯಲ್ಲಿ ಈ ಸರಣಿಯನ್ನು ಪ್ರಸಾರ ಮಾಡಲಾಗಿದೆ.

'XXX' ವೆಬ್ ಸರಣಿ ಸೀಸನ್-2ನಲ್ಲಿ ಸೈನಿಕರಿಗೆ ಅವಮಾನಿಸಿದ್ದಕ್ಕೆ ಮಾಜಿ ಸೈನಿಕ ಶಂಭುಕುಮಾರ್ ಅವರು ದೂರು ನೀಡಿದ್ದರು. ಸೈನಿಕರು ಮತ್ತು ಅವರ ಕುಟುಂಬಕ್ಕೆ ನೋವಾಗಿದೆ. ಸರಿಯಾದ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಹಾರದ ಬೇಗುಸರಾಯ್ ಕೋರ್ಟ್ ಅರೆಸ್ಟ್​ ವಾರೆಂಟ್ ಜಾರಿಗೊಳಿಸಿದೆ. ಈ ಸರಣಿಯಲ್ಲಿ ಸೈನಿಕನ ಪತ್ನಿಗೆ ಸಂಬಂಧಿಸಿದ ಆಕ್ಷೇಪಾರ್ಹ ದೃಶ್ಯಗಳಿವೆ, ಮಾತ್ರವಲ್ಲದೇ ಈ ಸರಣಿ ಸೈನಿಕರ ವಿರುದ್ಧವೇ ಮಾಡಿದ್ದಾರೆ ಶಂಭುಕುಮಾರ್ ಆಕ್ಷೇಪಿಸಿದ್ದಾರೆ.

ಈ ಮೊದಲು ವಿಚಾರಣೆ ನಡೆಸಿದ್ದ ಕೋರ್ಟ್​ ಸಮನ್ಸ್​ ಜಾರಿಗೊಳಿಸಿತ್ತು. ಆಗ ವಕೀಲರನ್ನು ನೇಮಕ ಮಾಡಿಕೊಂಡಿದ್ದ ತಾಯಿ-ಮಗಳು ಆ ಮೂಲಕ ಕೋರ್ಟ್​ಗೆ ಸಮಜಾಯಿಷಿ ನೀಡಿದ್ದರು. ಆಕ್ಷೇಪಣೆಯ ನಂತರ ಸರಣಿಯಲ್ಲಿನ ಕೆಲವು ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಅವರ ಪರ ವಕೀಲ ಹೃಷಿಕೇಶ್ ಪಾಠಕ್ ಕೋರ್ಟ್​ ಗಮನಕ್ಕೆ ತಂದರು. ಅದರೆ ನ್ಯಾಯಾಧೀಶ ವಿಕಾಸ್ ಕುಮಾರ್ ಅದನ್ನು ಮಾನ್ಯ ಮಾಡಲಿಲ್ಲ. ವಾರೆಂಟ್​ ಜಾರಿಗೊಳಿಸಿ ಆದೇಶಿಸಿದರು.

ಅಂದಹಾಗೆ, ‘ಎಕ್ಸ್ ಎಕ್ಸ್​ ಎಕ್ಸ್​’ ವೆಬ್​ ಸೀರಿಸ್​ನ ಮೊದಲ ಸೀಸನ್​ 2018ರಲ್ಲಿ ಪ್ರಸಾರವಾಗಿತ್ತು. 2020ರ ಜನವರಿಯಲ್ಲಿ ಎರಡನೇ ಸೀಸನ್​ ಬಿಡುಗಡೆ ಆಯಿತು. ಇದರ ಪ್ರತಿ ಎಪಿಸೋಡ್​ಗಳಲ್ಲಿ ಬೇರೆ ಬೇರೆ ಕಥೆ ಇದೆ. ಲೈಂಗಿಕ ಸಂಬಂಧಗಳ ವಿವಿಧ ಆಯಾಮಗಳನ್ನು ಇಟ್ಟುಕೊಂಡು ಈ ಸಂಚಿಕೆಗಳು ಮೂಡಿಬಂದಿವೆ. ಇದರಲ್ಲಿ ಸೈನಿಕರ ಕುಟುಂಬಕ್ಕೆ ಹಾಗೂ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net