

ಬಲೋಡಾ ಬಜಾರ್ (ಛತ್ತೀಸಗಢ): ಪತ್ನಿಯ ಶೀಲ ಶಂಕಿಸಿ ದೇವಾಲಯದ ಅರ್ಚಕನೋರ್ವ ದೇವಸ್ಥಾನದ ಕೊಠಡಿಯಲ್ಲಿಯೇ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಭಯಾನಕ ಘಟನೆ ಛತ್ತೀಸಗಢದ ಬಲೋಡಾ ಬಜಾರ್‌ನಲ್ಲಿ ನಡೆದಿದೆ.
ದಾಕಿನಿ ಪಾಂಡೆ (28) ಎಂಬ ಮಹಿಳೆ ಗಂಡನ ಸಂಶಯಕ್ಕೆ ಬಲಿಯಾದವರು. ಪತ್ನಿ ಅನ್ಯ ಪುರುಷನ ಜತೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದಾಳೆಂದು ಅನುಮಾನ ವ್ಯಕ್ತಪಡಿಸಿ ಈ ಕೃತ್ಯ ಎಸಗಿದವನು ರಾಮನಾರಾಯಣ ಪಾಂಡೆ (35). ಈ ಕೃತ್ಯ ಎಸಗುತ್ತಿದ್ದಂತೆಯೇ ಪೊಲೀಸರಲ್ಲಿ ರಾಮನಾರಾಯಣ, ತನ್ನ ಪತ್ನಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ. ನನಗೆ ಕಾರಣ ಗೊತ್ತಿಲ್ಲ ಎಂದು ಹೇಳಿದ್ದಾನೆ.
ದೇವಸ್ಥಾನದ ಕೋಣೆಗೆ ಬೆಂಕಿ ಹತ್ತಿರುವುದನ್ನು ನೋಡಿರುವ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಅವರು ಆಗಮಿಸಿದ್ದಾರೆ. ಆ ಸಮಯದಲ್ಲಿ ರಾಮನಾರಾಯಣ ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗಿ ನಿಜಾಂಶ ತಿಳಿದುಬಂದಿದೆ. ಮೃತ ಮಹಿಳೆಗೆ ಬೆಂಕಿ ಹಚ್ಚುವ ಮೊದಲು ಹರಿತವಾದ ಆಯುಧ ಬಳಸಿ ಕೊಲೆ ಮಾಡಲು ಪ್ರಯತ್ನ ನಡೆದಿರುವುದು ಪೊಲೀಸರಿಗೆ ತಿಳಿಯಿತು. ಅದು ಸಾಧ್ಯವಾಗದೇ ಇದ್ದಾಗ ಬೆಂಕಿ ಹಚ್ಚಲಾಗಿದೆ.
ಈ ಬಗ್ಗೆ ಸಂದೇಹ ಬರುತ್ತಿದ್ದಂತೆಯೇ ಅರ್ಚಕನನ್ನು ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಸತ್ಯಾಂಶ ಹೇಳಿದ್ದಾನೆ. ಪರ ಪುರುಷನ ಜತೆ ಪತ್ನಿಗೆ ಸಂಬಂಧ ಇತ್ತು. ಆದ್ದರಿಂದ ಹೀಗೆ ಮಾಡಿದೆ ಎಂದಿದ್ದಾನೆ. ಆತನ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿರುವ ಪೊಲೀಸರು, ಬಂಧನ ಮಾಡಿದ್ದು ತನಿಖೆ ಮುಂದುವರೆಸಿದ್ದಾರೆ.