ಕಾರಲ್ಲಿ ಬರ್ತಾರೆ- ಹೊಂಡ ಮುಚ್ಚುತ್ತಾರೆ: ನಿದ್ದೆ ಮಾಡುತ್ತಿರೋ ಅಧಿಕಾರಿಗಳಿಗಾಗಿ 11 ವರ್ಷಗಳಿಂದ ಈ ಕಾರ್ಯ!

couple
Published on

ಹೈದರಾಬಾದ್‌: ಚಿಕ್ಕಪುಟ್ಟ ಕೆಲಸ ಮಾಡಿ ಅಥವಾ ಮಾಡಿದಂತೆ ನಟಿಸಿ ಪೋಸ್‌ ಕೊಟ್ಟು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವವರಿಗೇನೂ ಕೊರತೆ ಇಲ್ಲ. ಅಂಥದ್ದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 11 ವರ್ಷಗಳಿಂದ ಯಾವುದೇ ಪ್ರಚಾರಕ್ಕೂ ಆಸೆಪಡದೇ ತಮ್ಮಷ್ಟಕ್ಕೇ ತಾವೇ ಬಂದು ಸಮಾಜ ಸೇವೆಯನ್ನು ಮಾಡುತ್ತಿರುವ ವೃದ್ಧ ದಂಪತಿಯ ಕಥೆ ಇದು.

ಹೈದರಾಬಾದ್‌ನ ಗಂಗಾಧರ್ ತಿಲಕ್ ಮತ್ತು ವೆಂಕಟೇಶ್ವರಿ ದಂಪತಿ ದಿನವೂ ತಮ್ಮ ಕಾರಿನಲ್ಲಿ ಬಂದು ರಸ್ತೆ ಹೊಂಡವನ್ನು ಸ್ವಚ್ಛಗೊಳಿಸಿ ಅದನ್ನು ಮುಚ್ಚಿ ಹೋಗುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಕಳೆದ 11 ವರ್ಷಗಳಿಂದ ಅವರು ಈ ಕಾರ್ಯದಲ್ಲಿ ತೊಡಗಿರುವುದು ಇದೀಗ ಬೆಳಕಿಗೆ ಬಂದಿದೆ. ಇವರ ಕಾರ್ಯವನ್ನು ನೋಡಿದವರೊಬ್ಬರು ಅವರ ಫೋಟೋ ತೆಗೆದು ಅದನ್ನು ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಇಂಥದ್ದೊಂದು ಮಹತ್ಕಾರ್ಯ ಇದೀಗ ದೇಶಾದ್ಯಂತ ವೈರಲ್‌ ಆಗಿದ್ದು, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.

ಭಾರತೀಯ ರೈಲ್ವೆ ಉದ್ಯೋಗಿಯಾಗಿದ್ದ ಗಂಗಾಧರ್ ನಿವೃತ್ತಿ ಬಳಿಕ ಹೈದರಾಬಾದ್‌ಗೆ ಹೋಗಿದ್ದಾರೆ. ಈ ಸಮಯದಲ್ಲಿ ಅವರು ರಸ್ತೆಗುಂಡಿಗಳಿಂದ ದಿನನಿತ್ಯ ಆಗುವ ಅಪಘಾತಗಳನ್ನು ನೋಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೂ ಸಾಕಷ್ಟು ಬಾರಿ ತಂದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಆದ್ದರಿಂದ ಇನ್ನು ಸುಮ್ಮನೆ ಬಿಟ್ಟರೆ ಜನರ ಪ್ರಾಣಕ್ಕೆ ಅಪಾಯವಿದೆ ಎಂದು ಅರಿತ ಗಂಗಾಧರ್‌ ಅವರು ತಮ್ಮ ಪತ್ನಿ ಸಹಿತವಾಗಿ ದಿನನಿತ್ಯವೂ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

"ನಾನು ಪಿಂಚಣಿ ಹಣವನ್ನು ಇದಕ್ಕಾಗಿ ಉಪಯೋಗಿಸುತ್ತಿದ್ದೇನೆ. ಇದುವರೆಗೂ ಸುಮಾರು ಎರಡು ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಿದ್ದೇನೆ" ಎನ್ನುತ್ತಾರೆ ಗಂಗಾಧಕರ್. ಸರ್ಕಾರಗಳು ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತವೆ. ಆದರೆ ರಸ್ತೆಯಲ್ಲಿ ಗುಂಡಿಯಲ್ಲಿ ಹಾಗೆಯೇ ಉಳಿದು ಅಪಘಾತಗಳು ಸಂಭವಿಸಿ ಅನೇಕ ಮಂದಿ ಜೀವ ಕಳೆದುಕೊಳ್ಳುತ್ತಾರೆ. ಅದನ್ನು ನೋಡಲಾಗದೇ ಹೀಗೆ ಮಾಡಿರುವುದಾಗಿ ಈ ದಂಪತಿ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net