ಸುಮಲತಾ v/s ಕುಮಾರಸ್ವಾಮಿ: ಮಾಜಿ ಸಿಂಎ ಹಾಕಿದರು ಫುಲ್‌ಸ್ಟಾಪ್‌: ಸಂಸದೆ ಮಾಡಿದರೊಂದು ಟ್ವೀಟ್‌

sumalatha
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಡುವೆ ವಾಕ್ಸಮರ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ನಿನ್ನೆಯಷ್ಟೇ ಕುಮಾರಸ್ವಾಮಿ ಅವರು ಟ್ವೀಟ್‌ ಮಾಡುವ ಮೂಲಕ ಈ ವಾಗ್ಯುದ್ಧವನ್ನು ನಿಲ್ಲಿಸುವುದಾಗಿ ಹೇಳಿದ್ದರು. ತಮಗೆ ಮಾಡಲು ಬೇರೆ ಕೆಲಸವಿದ್ದು, ಅವುಗಳತ್ತ ಗಮನ ಹರಿಸುವುದಾಗಿ ಹೇಳಿದರು.

ಟ್ವೀಟ್‌ ಮೂಲಕ ಯಾವುದೇ ಹೇಳಿಕೆಗಳನ್ನು ನೀಡದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಾರ್ಯಕರ್ತ ಬಂಧುಗಳೇ, ಅಭಿಮಾನಿ ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ ನಾವು ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ ಎಂದು ಮನವಿ ಮಾಡಿದ್ದಾರೆ.

ಇದೀಗ ಈ ವಿಷಯದ ಕುರಿತು ಟ್ವೀಟ್‌ ಮೂಲಕವೇ ಸುಮಲತಾ ಉತ್ತರಿಸಿದ್ದಾರೆ. ಅದೇನೆಂದರೆ ಯಾರ ಹೆಸರನ್ನೂ ಉಲ್ಲೇಖಿಸದ ಸಂಸದೆ, ‘ಶುಭೋದಯ, ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ. ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ’ ಎಂದು ಮಾತಿನ ಏಟು ನೀಡಿದ್ದಾರೆ.

ನಿನ್ನೆ ಕುಮಾರಸ್ವಾಮಿ ಅವರು ಮಾಡಿದ್ದ ಟ್ವೀಟ್‌ನಲ್ಲಿ, ‘ ದಯವಿಟ್ಟು ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷದ ವರ್ಚಸ್ಸು, ಬೆಳವಣಿಗೆ ಹಾಗೂ ಭವಿಷ್ಯದ ಚುನಾವಣೆ , ಇವುಗಳನ್ನು ಮೊದಲ ಆದ್ಯತೆ ಎಂದು ಭಾವಿಸಿ ಈ ನಿಟ್ಟಿನಲ್ಲಿ ಚಿಂತಿಸಬೇಕು ಹಾಗು ಕಾರ್ಯಪ್ರವೃತ್ತರಾಗಬೇಕಿದೆ. ಅನಗತ್ಯವಾಗಿ ನಮ್ಮನ್ನು ಪ್ರಚೋದಿಸಿ ಕೆರಳಿಸಿ,ನಮ್ಮಿಂದಲೇ ನಮ್ಮ ಪಕ್ಷದ ವರ್ಚಸ್ಸು ಕಡಿಮೆಯಾಗುವಂತಹ ನಮ್ಮ ಎದುರಾಳಿಗಳ ತಂತ್ರಕ್ಕೆ ನಾವು ಬಲಿಯಾಗದಂತೆ ಸ್ವಯಂ ಸಹನೆ ಹಾಗೂ ಸಂಯಮವನ್ನು ತೋರಿಸುವುದು ಈ ಗಳಿಗೆಯ ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದಿದ್ದರು. ಇದೀಗ ಸುಮಲತಾ ಅವರು ತಿರುಗೇಟು ನೀಡಿರುವ ಹಿನ್ನೆಲೆಯಲ್ಲಿ ಪುನಃ ಏನಾಗಲಿದೆ ಎನ್ನುವುದನ್ನು ನೋಡಬೇಕಿದೆ.

ಸುಮಲತಾ ಅವರು ಮಾಡಿರುವ ಟ್ವೀಟ್‌ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net