

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ನಿನ್ನೆಯಷ್ಟೇ ಕಾಂಗ್ರೆಸ್ ನಾಯಕ ಅಮರೀಂದರ್ ಸಿಂಗ್ ರಾಜೀನಾಮೆ ಕೊಟ್ಟ ಬಳಿಕ ಇಂದು ಈ ಹುದ್ದೆಗೆ ಯಾರು ಎಂಬ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದ್ದು, ಇದರ ಬೆನ್ನಲ್ಲೇ ಕೆಲವು ಹೆಸರುಗಳು ಕೇಳಿಬರುತ್ತಿವೆ.
ಪಂಜಾಬ್ ವಿಧಾನಸಭೆಗೆ ನಾಲ್ಕೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಸಿಎಂ ಹುದ್ದೆ ಯಾರ ಬುಡಕ್ಕೆ ಬರಲಿದೆ ಎಂಬ ಬಗ್ಗೆ ಆಕಾಂಕ್ಷಿಗಳು ಕಾತರರಾಗಿದ್ದಾರೆ.
ಈ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ ಹಿರಿಯ ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ಮಾತ್ರ ತಮಗೆ ಬಂದಿರುವ ಈ ಹುದ್ದೆಯನ್ನು ನಯವಾಗಿ ನಿರಾರಕರಿಸಿದ್ದಾರೆ. ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಸಭಾ ಸದಸ್ಯೆ ಅಂಬಿಕಾ ಸೋನಿ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದರು. ಆದರೆ, ಆ ಪ್ರಸ್ತಾಪವನ್ನು ತಿರಸ್ಕರಿಸಿರುವ ಅಂಬಿಕಾ, ಮುಖ್ಯಮಂತ್ರಿ ಹೊಣೆಯನ್ನು ತಾವು ಹೊರುವುದಿಲ್ಲ ಎಂದಿದ್ದಾರೆ. ಬದಲಿಗೆ ಅವರು ಹೇಳಿದ್ದೇನೆಂದರೆ, ಪಂಜಾಬ್‌ನ ಮುಖ್ಯಮಂತ್ರಿಯ ಮುಖವು ಸಿಖ್ ಅವರದ್ದಾಗಿರಬೇಕು. ಆದ್ದರಿಂದ ಸಿಖ್ ಸಮುದಾಯಕ್ಕೆ ಸೇರಿದವರು ಸಿಎಂ ಆಗಲಿ ಎಂದಿದ್ದಾರೆ.
ನವದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡಿರುವ ಅಂಬಿಕಾ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಅಷ್ಟಕ್ಕೂ ಯಾರೀ ಅಂಬಿಕಾ?
ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿರುವ ಅಂಬಿಕಾ ಕಾಂಗ್ರೆಸ್ ಪಕ್ಷ ಸೇರಿದ್ದು 1969ರಲ್ಲಿ. ಪಂಜಾಬ್‌ನ ಹೋಶಿಯಾರ್‌ಪುರ್ ಜಿಲ್ಲೆಯವರಾದ ಅಂಬಿಕಾ ಅವರ ತಂದೆ ದೇಶ ವಿಭಜನೆಯ ಸಮಯದಲ್ಲಿ ಅಮೃತಸರದ ಜಿಲ್ಲಾಧಿಕಾರಿಯಾಗಿದ್ದವರು ಹಾಗೂ ನೆಹರೂ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಈ ಹಿನ್ನೆಲೆಯಲ್ಲಿ 1969ರಂದು ಅಂಬಿಕಾ ಅವರನ್ನು ಕಾಂಗ್ರೆಸ್‌ಗೆ ಪರಿಚಯಿಸಿದವರು ಇಂದಿರಾಗಾಂಧಿ.
ಅಂಬಿಕಾ ಅವರು ಇದಾಗಲೇ ಹಲವು ಬಾರಿ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಸಾಹಿಬ್‌ನಿಂದ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಪಂಜಾಬ್ ಮುಖ್ಯಮಂತ್ರಿ ರೇಸ್‍ನಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸುನಿಲ್ ಜಕ್ಕರ್, ಲೂಯಾನಾ ಸಂಸದ ರವನಿತ್‍ಸಿಂಗ್ ಬಿಟ್ಟು, ರಾಜ್ಯಸಭಾ ಸದಸ್ಯ ಪ್ರತಾಪ್ ಸಿಂಹ್ ಭಾಜ್ವಾ, ಸುಖ್‍ಜೀಂದರ್‍ಸಿಂಗ್ ರಾಂಧವ್ ಅವರುಗಳು ಕೇಳಿಬಂದಿವೆ.