

ಜೆರುಸಲೇಂ: 1998ರಲ್ಲಿ ತಾಂಜಾನಿಯಾ ಮತ್ತು ಕೀನ್ಯಾದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿ ಮೇಲೆ ನಡೆದ ಬಾಂಬ್‌ದಾಳಿ ಆರೋಪಿ, ಅಲ್‌ಖೈದಾ ಸಂಘಟನೆಯ ಮುಖಂಡ ಅಬ್ದುಲ್ಲಾ ಅಹಮ್ಮದ್ ಅಬ್ದುಲ್ಲಾ ಅಲಿಯಾಸ್ ಅಬು ಮುಹಮ್ಮದ್ ಮಸ್ರಿಯನ್ನು ರಹಸ್ಯವಾಗಿ ಹತ್ಯೆಯಾಗಿದ್ದಾನೆ!
ಅಮೆರಿಕದ ಸೂಚನೆ ಮೇರೆಗೆ ಆಗಸ್ಟ್‌ನಲ್ಲಿ ರಹಸ್ಯವಾಗಿ ಇಸ್ರೇಲ್ ಗೂಢಚರರು ಹತ್ಯೆಗೈದಿರುವುದಾಗಿ ತಿಳಿದುಬಂದಿದೆ. ಎಫ್‌ಬಿಐ ತನಿಖಾ ಸಂಸ್ಥೆಯ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ಈತ ಅಲ್‌ಖೈದಾ ಉಗ್ರಗಾಮಿ ಸಂಘಟನೆಯ ಎರಡನೇ ಮುಖ್ಯ ಕಮಾಂಡ್ ಆಗಿದ್ದ.
ಈತನನ್ನು ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಆಗಸ್ಟ್ 7ರಂದು ಬೈಕ್‌ನಲ್ಲಿ ಆಗಮಿಸಿದ್ದ ಇಸ್ರೇಲ್ ಗೂಢಚರರು ಹತ್ಯೆಗೈದಿರುವುದಾಗಿ ಗುಪ್ತಚರ ಇಲಾಖೆಯ ಮಾಹಿತಿಯನ್ನಾಧರಿಸಿದ ವರದಿಯೊಂದು ಬಹಿರಂಗಗೊಳಿಸಿದೆ. ಅಲ್ ಖೈದಾ ಸಂಘಟನೆಯ ಅಲ್ ಜವಾಹಿರಿ ಈವರೆಗೂ ರಹಸ್ಯವಾಗಿದ್ದ ಹಿನ್ನೆಲೆಯಲ್ಲಿ ಮಸ್ರಿಯನ್ನು ನಾಯಕನನ್ನಾಗಿ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ಆಗಸ್ಟ್ 7ರಂದು ಆಯೋಜಿಸಲಾಗಿದ್ದ ಆಫ್ರಿಕಾ ಬಾಂಬ್ ಸ್ಫೋಟದ ವಾರ್ಷಿಕೋತ್ಸವದಂದು ನಡೆದ ಈ ದಾಳಿಯನ್ನು ಅಮೆರಿಕ, ಇರಾನ್, ಇಸ್ರೇಲ್ ಅಥವಾ ಅಲ್-ಖೈದಾ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಈ ದಾಳಿಯಲ್ಲಿ 224 ಮಂದಿ ಮೃತಪಟ್ಟಿದ್ದರು. 5 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಆದರೆ ಈತನ ಹತ್ಯೆಯ ಕುರಿತು ಯಾರೂ ಬಾಯಿಬಿಟ್ಟಿಲ್ಲ. ಟೆಹ್ರಾನ್‌ನಲ್ಲಿನ ಇಸ್ರೇಲ್ ಏಜೆಂಟರಾಗಲೀ, ಇರಾನ್, ಅಲ್‌ಖೈದಾ, ಅಮೆರಿಕ ಅಥವಾ ಇಸ್ರೇಲ್ ಯಾರೂ ಈ ಹತ್ಯೆಯ ಕುರಿತು ಹೇಳಿಕೆ ಕೊಟ್ಟಿಲ್ಲ ಎನ್ನಲಾಗಿದೆ.
ಈತನ ಮಾಹಿತಿ ನೀಡಿದವರಿಗೆ ಅಮೆರಿಕದ ಫೆಡರಲ್ ಅಧಿಕಾರಿಗಳು, 1 ಕೋಟಿ ಡಾಲರ್ ಬಹುಮಾನವನ್ನು ಘೋಷಿಸಿದ್ದರು.