ಶ್ರೀರಾಮಚಂದ್ರ ಯಾವ ಪಕ್ಷಕ್ಕೆ ಸೇರಿದ್ದು ಎಂದು ತಿಳಿಸಿದ ಮಾಜಿ ಸಿಎಂ ಅಖಿಲೇಶ್​!

akhilesh yadav
Published on

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಶ್ರೀರಾಮಚಂದ್ರನ ಕುರಿತು ಮಾತನಾಡಿದ್ದು, ಆತ ಯಾವ ಪಕ್ಷಕ್ಕೆ ಸೇರಿದ್ದು ಎಂದು ತಮಗೆ ಗೊತ್ತಿದೆ ಎಂದಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಅಯೋಧ್ಯೆಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದ ಅಖಿಲೇಶ್​ ಭಗವಾನ್ ಶ್ರೀರಾಮಚಂದ್ರ ಸಮಾಜವಾದಿ ಪಕ್ಷಕ್ಕೆ ಸೇರಿದವ. ನಾವೆಲ್ಲಾ ರಾಮ ಮತ್ತು ಕೃಷ್ಣನ ಭಕ್ತರು ಎಂದಿದ್ದಾರೆ.

ಅಜಮಗಢದಿಂದ ಲಖನೌಗೆ ವಾಪಸಾಗುತ್ತಿದ್ದ ವೇಳೆ ಅಯೋಧ್ಯೆಯಲ್ಲಿ ತಮ್ಮ ಪಕ್ಷದ ಮುಖಂಡರ ಜತೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ, ಶ್ರೀರಾಮ ತಮ್ಮದೇ ಪಕ್ಷಕ್ಕೆ ಸೇರಿದವನು ಎಂದಿದ್ದಾರೆ.

ತಾವು ಈ ಹಿಂದೆ ಅಯೋಧ್ಯೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದ ಅಖಿಲೇಶ್​, ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಪಾರಿಜಾತ ಗಿಡಗಳ ಸಹಿತ 'ಪರಿಕ್ರಮ ಮಾರ್ಗ' ನಿರ್ಮಿಸಲಾಗಿತ್ತು. ಈ ವರ್ತುಲ ರಸ್ತೆಯಲ್ಲಿ ದೀಪಾವಳಿ ಹಬ್ಬದ ಬಳಿಕ ಭಕ್ತರು ಪ್ರದಕ್ಷಿಣೆ ಬರುತ್ತಾರೆ. ಧಾರ್ಮಿಕ ಪ್ರಾಮುಖ್ಯಯುಳ್ಳ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿತ್ತು. ಈ ಮೂಲಕ ತಮ್ಮ ಸರ್ಕಾರ ಅಯೋಧ್ಯೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ ಎಂದರು.

ಸರಯೂ ನದಿ ದಂಡೆಯಲ್ಲಿ, ರಾಮ ದೇವರನ್ನು ಪೂಜಿಸುವ ಸ್ಥಳದಲ್ಲಿ ಧ್ವನಿವರ್ಧಕ ಹಾಗೂ ದೀಪಗಳ ವ್ಯವಸ್ಥೆ ಮಾಡಿದ್ದು ತಮ್ಮ ಸರ್ಕಾರವೇ ಎಂದು ಅವರು ಹೇಳಿದ್ದಾರೆ. ಜತೆಗೆ, ಶೀಘ್ರದಲ್ಲೇ ಕುಟುಂಬ ಸಮೇತ ಅಯೋಧ್ಯೆ ರಾಮ ಜನ್ಮಭೂಮಿಗೆ ಭೇಟಿ ನೀಡಿ ರಾಮನಿಗೆ ಪೂಜೆ ಸಲ್ಲಿಸುವುದಾಗಿ ಅವರು ಹೇಳಿದರು.

2022ರ ವಿಧಾನಸಭೆ ಚುನಾವಣೆಯ ಕುರಿತು ಮಾತನಾಡಿದ ಅವರು, ದೊಡ್ಡ ಪಕ್ಷಗಳೊಂದಿಗೆ ಸೇರುವುದು ಒಳಿತಲ್ಲ, ಆದ್ದರಿಂದ ಸಣ್ಣ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಲಾಗುವುದು. ಇದರೊಂದಿಗೆ ನಮ್ಮ ಪಕ್ಷವು ಕನಿಷ್ಠ 350ರಿಂದ 403 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net