

ನವದೆಹಲಿ: ಅತ್ತ ಕೃಷಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಎರಡು ವಾರಗಳಿಂದ ದೇಶ-ವಿದೇಶಗಳಲ್ಲಿ ರೈತರು, ಅದರಲ್ಲಿಯೂ ಮುಖ್ಯವಾಗಿ ಪಂಜಾಬ್-ಹರಿಯಾಣದವರು ಭಾರಿ ಪ್ರತಿಭಟನೆ ನಡೆಸುತ್ತಿದ್ದರೆ, ಇವರ ಮಾತನ್ನೇನಾದರೂ ಕೇಳಿ ಕೃಷಿ ಕಾಯ್ದೆ ರದ್ದು ಮಾಡಿದರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹರಿಯಾಣದ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ!
ಈ ಕಾಯ್ದೆಗಳು ಸಂಪೂರ್ಣ ರೈತರ ಪರವಾಗಿದ್ದು, ಈ ಕಾಯ್ದೆಗಾಗಿ ದಶಕಗಳಿಂದ ತಾವು ಹೋರಾಟ ನಡೆಸಿದ್ದು, ಯಾವುದೇ ಕಾರಣಕ್ಕೂ ಇದನ್ನು ರದ್ದು ಮಾಡುವುದಾಗಲೀ, ಹಿಂಪಡೆಯುವುದಾದಗಲೀ ಮಾಡುವಂತಿಲ್ಲ ಎಂದು ರೈತ ನಿಯೋಗವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಹರಿಯಾಣದ ರೈತರ ನಿಯೋಗವೊಂದು, ಭಾರತೀಯ ಕಿಸಾನ್ ಘಟಕದ ನಾಯಕ ಗುಣಿ ಪ್ರಕಾಶ್ ಅವರ ನೇತೃತ್ವದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಶನಿವಾರ ಭೇಟಿ ಮಾಡಿ ಈ ಮಾಹಿತಿ ನೀಡಿದ್ದು, ಯಾವುದೇ ಕಾರಣಕ್ಕೂ ಕಾಯ್ದೆಯನ್ನು ಜಾರಿಗೊಳಿಸಲೇಬೇಕು ಎಂದು ಹೇಳಿದೆ.
ಆದರೆ ಅದೇ ಇನ್ನೊಂದೆಡೆ, ಕಾಯ್ದೆಯನ್ನು ವಾಪಸ್ ಪಡೆದುಕೊಳ್ಳದೇ ಹೋದರೆ ಡಿ.14ರಂದು ದೇಶಾದ್ಯಂತ ರೈತ ಸಂಘಟನೆಯ ನಾಯಕರು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಈಗ ಹೋರಾಟ ಮಾಡುತ್ತಿರುವವರು ಶಪಥ ಮಾಡಿದ್ದಾರೆ!