

ನವದೆಹಲಿ: ದೇಶದ ಅತ್ಯಂತ ದೊಡ್ಡ ಟೆಲಿಕಾಂ ನೆಟ್ವರ್ಕ್ ಎನಿಸಿಕೊಂಡಿರುವ ಏರ್ಟೆಲ್ ತನ್ನ ಗ್ರಾಹಕರಿಗೆ ದೊಡ್ಡದೊಂದು ಶಾಕ್ ನೀಡಿದೆ. ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ದರವನ್ನು ಹೆಚ್ಚಳ ಮಾಡಿದೆ.
ಈಗಾಗಲೇ ಕೆಲ ರಾಜ್ಯಗಳಲ್ಲಿ ರಿಚಾರ್ಜ್ ಶುಲ್ಕ ದರಗಳಲ್ಲಿ ಪರಿಷ್ಕರಣೆ ಮಾಡಿರುವ ಏರ್ಟೆಲ್ ಇದೀಗ ದೇಶಾದ್ಯಂತ ಈ ದರ ಹೆಚ್ಚಳವನ್ನು ಅನ್ವಯ ಮಾಡಿದೆ. ಟೆಲಿಕಾಂ ನೆಟ್ ವರ್ಕ್ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಆಗುತ್ತಿರುವ ಸಂದರ್ಭದಲ್ಲಿಯೇ ಏರ್ಟೆಲ್ ಈ ನಿರ್ಧಾರ ತೆಗೆದುಕೊಂಡಿದೆ. ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ದರವನ್ನು ಶೇಕಡಾ 60 ರಷ್ಟು ಏರಿಕೆ ಮಾಡಿದೆ.
ಶೇಕಡಾ 60ರಷ್ಟು ಹೆಚ್ಚಳ ಮಾಡಿರುವುದರಿಂದ 49 ರೂಪಾಯಿಗೆ ಇದ್ದ ರೀಚಾರ್ಜ್ ಬೆಲೆ ಈಗ 79 ರೂಪಾಯಿ ಆಗಿದೆ.
ಈ ಮೊದಲು 49 ರೂಪಾಯಿಯ ಪ್ಲಾನ್ನಲ್ಲಿ 100 ಎಂಬಿ ಡೇಟಾ ಮತ್ತು 38.52 ರೂಪಾಯಿ ಮೌಲ್ಯದ ಟಾಕ್ ಟೈಮ್ ದೊರೆಯುತ್ತಿತ್ತು. 100 ಎಂಬಿ ಡೇಟಾ ಮಗಿದ ಮೇಲೆ ಪ್ರತಿ ಒಂದು ಎಂಬಿ ಡೇಟಾಗೆ 0.50ರಷ್ಟು ಶುಲ್ಕ ಬೀಳುತ್ತಿತ್ತು. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತಿತ್ತು. ಆದರೆ 79 ರೂಪಾಯಿ 28 ದಿನಗಳ ಸಿಂಧುತ್ವ ಇರಲಿದ್ದು, 64ರ ಟಾಕ್ ಟೈಮ್ ಮತ್ತು 200 ಎಂಬಿ ಡೇಟಾ ದೊರೆಯಲಿದೆ ಎಂದು ಕಂಪೆನಿ ಹೇಳಿದೆ. ಬೇರೆ ಕಂಪೆನಿಗಳ ಸಿಮ್ ಉಪಯೋಗಿಸುತ್ತಿರುವ ಹಲವು ಗ್ರಾಹಕರು ಈ ಆರಂಭಿಕ ಪ್ಲ್ಯಾನ್ ಆಗಿರುವ ರೂ.49 ಮಾತ್ರ ರೀಚಾರ್ಜ್ ಮಾಡುತ್ತಿದ್ದು, ಅವರಿಗೆ ಈ ಹೊಸ ಶುಲ್ಕ ಭಾರಿ ಹೊಡೆತ ಬೀಳಲಿದೆ.
ರಿಚಾರ್ಜ್ ಶುಲ್ಕದಲ್ಲಿ ಕಡಿತ ಅಲ್ಲದೇ, ಸೇವಾವಧಿಯಲ್ಲಿ ಇಳಿಕೆ ಕೂಡ ಮಾಡಲು ಚಿಂತನೆ ನಡೆಸಿದ್ದು ಇದು ಮುಂದಿನ ತಿಂಗಳಿನಿಂದ ಜಾರಿ ಬರುವ ನಿರೀಕ್ಷೆ ಇದೆ.