‘ಇಲ್ಲಿಂದ ಹುಲ್ಲು ಹಾಕಿದ್ರೆ ಅಲ್ಲಿಂದ ಹಾಲು ಬರತ್ತೆ’ ಎಂದ ಜಾಹೀರಾತು ಕಂಪೆನಿಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತರು!

advertise
Published on

ಮುಂಬೈ: ಪಾನೀಯ ಒಂದರ ಜಾಹೀರಾತು ವೇಳೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್‌ ಗಾಂಧಿಯವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಆ ಜಾಹೀರಾತು ಕಂಪೆನಿಯೊಳಕ್ಕೆ ನುಗ್ಗಿ ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ.

ಸ್ಟೋರಿಯಾ ಫುಡ್ಸ್ ಆ್ಯಂಡ್‌ ಬಿವರೇಜಸ್ ಎಂಬ ಮುಂಬೈ ಮೂಲದ ಕಂಪೆನಿ, ಇಂಥದ್ದೊಂದು ಜಾಹೀರಾತು ಮಾಡಿದೆ. ಅದರಲ್ಲಿ ಯುವಕನೊಬ್ಬ ಇಲ್ಲಿಂದ ಹುಲ್ಲುಹಾಕಿದ್ರೆ ಅಲ್ಲಿಂದ ಹಾಲು ಬರುವ ಮಷಿನ್‌ ಕಂಡುಹಿಡಲಾಗಿದೆ ಎನ್ನುತ್ತಾನೆ. ಆಗ ಜಾಹೀರಾತಿನಲ್ಲಿ ಇರುವ ಯುವಕನ ಅಮ್ಮ, ತಲೆ ಚಚ್ಚಿಕೊಳ್ಳುತ್ತಾ ಅದು ಮಷಿನ್‌ ಅಲ್ಲ, ಗಾಯ್‌ (ಹಸು) ಎನ್ನುತ್ತಾಳೆ. ಆಗ ಯುವಕ ಗಾಯ್‌, ಇವರು ಯಾವ ಗೈಸ್‌, ಅವರು ಅಧಿಕಾರ ಇರುವವರೋ ಅಥವಾ... ಎನ್ನುತ್ತಾ ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಅಲ್ಲಿರುವ ಯುವತಿ ಹಾಗೂ ಯುವಕನ ಅಮ್ಮ ಪುನಃ ತಲೆ ಚಚ್ಚಿಕೊಳ್ಳುತ್ತಾರೆ... ಇದು ಈ ಜಾಹೀರಾತಿನಲ್ಲಿ ಇರುವ ಅಂಶ.

ಇದು ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಅವಹೇಳನವಾಗಿದೆ ಎಂದಿರುವ ಮುಂಬೈ ಕಾಂಗ್ರೆಸ್ ಮತ್ತು ಮುಂಬೈ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಂಪೆನಿಗೆ ನುಗ್ಗಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ .ಈ ಜಾಹೀರಾತು ವಿರುದ್ಧ ಪ್ರತಿಭಟಿಸುವುದಕ್ಕಾಗಿ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯ್ ಜಗತಾಪ್ ಅವರ ನಿರ್ದೇಶನದಂತೆ, ಪ್ರಧಾನ ಕಾರ್ಯದರ್ಶಿ ನಿತಿನ್ ಸಾವಂತ್ ಮತ್ತು ಮುಂಬೈ ಯೂತ್ ಕಾಂಗ್ರೆಸ್ ನಾಯಕರು ಮುಂಬೈಯ ಪೂರ್ವ ಅಂಧೇರಿಯಲ್ಲಿರುವ ಕಂಪೆನಿಗೆ ನುಗ್ಗಿರುವುದಾಗಿ ಕಾಂಗ್ರೆಸ್ ಘಟಕದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಜಗತಾಪ್, ಕಂಪೆನಿಯ ಜಾಹೀರಾತು ವಿರುದ್ಧ ಪ್ರತಿಭಟಸಿದ್ದಕ್ಕೆ ಅಭಿನಂದನೆ ಮತ್ತು ಶ್ಲಾಘನೆ. ಈ ರೀತಿ ಕೆಟ್ಟ ವ್ಯಾಪಾರಗಳನ್ನು ನಾವು ಸಹಿಸಿಕೊಳ್ಳಬಾರದು ಎಂದಿದ್ದಾರೆ.

ಜಾಹೀರಾತು ಇಲ್ಲಿದೆ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net