ದರ್ಗಾಗೆ ಪ್ರಯಾಣಿಸುತ್ತಿದ್ದವರು ರಸ್ತೆ ಮಧ್ಯೆಯೇ ಹೆಣವಾದರು! ಭಯಾನಕ ಅಪಘಾತದಲ್ಲಿ ಆರು ಮಂದಿ ಸಾವು

accident
Published on

ಹೈದರಾಬಾದ್‌: ದರ್ಗಾಗೆ ಪ್ರಯಾಣಿಸುತ್ತಿದ್ದವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇವರು ಪ್ರಯಾಣಿಸುತ್ತಿದ್ದ ಟೊಯೊಟಾ ಕ್ವಾಲಿಸ್‌ ನಿಂತಿದ್ದ ಲಾರಿಗೆ ಗುದ್ದಿದ ಪರಿಣಾಮ ಈ ಘಟನೆ ಸಂಭವಿಸಿದೆ. ಎರಡು ಕುಟುಂಬದ 12 ಮಂದಿ ಮಹಾರಾಷ್ಟ್ರದ ನಾಂದೇಡ್‍ನಲ್ಲಿರುವ ಹಜರತ್ ಶಾ ಕಾಮಿಲ್ ದಾದ್ ದರ್ಗಾಗೆ ಹೋಗುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಮೃತಪಟ್ಟವರು ಮತ್ತು ಗಾಯಾಳುಗಳು ಹೈದರಾಬಾದ್‍ನ ಮಲಕ್‍ಪೇಟ್ ಮತ್ತು ಚಾದರ್‍ಘಾಟ್‍ನ ನಿವಾಸಿಗಳು ಎಂದು ಗುರುತಿಸಲಾಗಿದೆ.

ಟೊಯೊಟಾ ಕ್ವಾಲಿಸ್ ಚಾಲಕನ ಅತಿ ವೇಗದ ಚಾಲನೆಯಿಂದ ಈ ಅನಾಹುತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 161ರಲ್ಲಿ ವೇಗವಾಗಿ ಬಂದ ಟೊಯೊಟಾ ಕ್ವಾಲಿಸ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಇದರ ರಭಸಕ್ಕೆ ಕಾರಿನ ಅರ್ಧ ಭಾಗ ಸಂಪೂರ್ಣವಾಗಿ ಜಖಂಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತಕ್ಕೀಡಾಗಿರುವ ಸಂಬಂಧಿಕರಿಗಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಬಾನ್ಸವಾಡ ಡಿಎಸ್‍ಪಿ ಜೈಪಾಲ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net