ಸುಪ್ರೀಂ​ ಅಂಗಳಕ್ಕೆ ಎಸಿಬಿ ರದ್ದತಿ ವಿವಾದ: ಹೈಕೋರ್ಟ್​ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆ- ಸಿದ್ದರಾಮಯ್ಯ ಹೇಳಿದ್ದೇನು?

ACB
Published on

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯನ್ನೇ ರದ್ದು ಮಾಡಿರುವ ಹೈಕೋರ್ಟ್​, ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಹೊರಡಿಸಿದ್ದ ಆದೇಶದ ವಿರುದ್ಧ ಸುಪ್ರೀಂಕೋರ್ಟ್​ಗೆ ವಿಶೇಷ ಮೇಲ್ಮನವಿ ಸಲ್ಲಿಸಲಾಗಿದೆ.

2016ರಲ್ಲಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸ್ಥಾಪಿಸಲಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯನ್ನು ರದ್ದುಗೊಳಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕನಕರಾಜು ಎಂಬುವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಭ್ರಷ್ಟ ರಾಜಕಾರಣಿಗಳು, ಸಚಿವರು ಮತ್ತು ಅಧಿಕಾರಿಗಳನ್ನು ಲೋಕಾಯುಕ್ತರ ಕಾವಲು ಕಣ್ಣುಗಳಿಂದ ರಕ್ಷಿಸುವುದಕ್ಕಾಗಿಯೇ ರಾಜ್ಯ ಸರ್ಕಾರವು ಎಸಿಬಿಯನ್ನು ಸ್ಥಾಪಿಸಿದೆ ಎಂದು ಕಟುವಾಗಿ ಚಾಟಿ ಬೀಸಿದ್ದ ಹೈಕೋರ್ಟ್ ಆಗಸ್ಟ್ 11 ರಂದು ಎಸಿಬಿಯನ್ನು ರದ್ದುಗೊಳಿಸಿತ್ತು. ಇದನ್ನು ಈಗ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ.

ಅರ್ಜಿದಾರರು ತಮಗೆ ಲಂಚ ಬೇಡಿಕೆ ಇಟ್ಟಿದ್ದ ಬೆಸ್ಕಾಂ ವಿಚಕ್ಷಣಾ ದಳ ಠಾಣೆಯ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಇದರ ವಿಚಾರಣೆ ನಡೆಯುತ್ತಿರುವಾಗಲೇ ಅದನ್ನು ರದ್ದುಗೊಳಿಸಿರುವುದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದ. ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವುದರಿಂದ ಆರೋಪಿ ವ್ಯಕ್ತಿಗಳಿಗೆ ವರದಾನವಾಗಬಹುದು. ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಕ್ರಿಮಿನಲ್ ವಿಷಯಗಳ ತನಿಖೆ ಮತ್ತು ಅದರ ಪರಿಣಾಮ ಮತ್ತು ಇತರ ಪ್ರಕರಣಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಅರ್ಜಿಯ ವಿಚಾರಣೆ ಶೀಘ್ರದಲ್ಲಿ ಕೋರ್ಟ್​ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಅದೇ ಇನ್ನೊಂದೆಡೆ, ಎಸಿಬಿ ರದ್ದತಿ ಕುರಿತು ಹೈಕೋರ್ಟ್​ ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.  ಎಸಿಬಿ ರಚನೆಯಾಗಿದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಈ ಹಿನ್ನೆಲೆಯಲ್ಲಿ ಅವರಿಗೆ ಪ್ರಶ್ನೆ ಕೇಳಿದಾಗ, ಸಿದ್ದರಾಮಯ್ಯನವರು, ಹೈಕೋರ್ಟ್​ ತೀರ್ಪಿನ ವಿರುದ್ಧ ನಾವು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕೋರ್ಟ್​ ಆದೇಶವನ್ನು ಪಾಲನೆ ಮಾಡುತ್ತೇವೆ. ಇದರ ವಿರುದ್ಧ ಪ್ರಶ್ನೆ ಮಾಡುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net