ಅಮ್ಮಂದಿರೇ ಎಚ್ಚರ.... ಎದೆಹಾಲು ಕುಡಿಯದೆ ಒಂದೇ ಸಮನೆ ಅಳುತ್ತಿದ್ದ ಮಗುವಿನ ಎಕ್ಸ್​ರೇ ತೆಗೆದ ವೈದ್ಯರೇ ದಂಗು!

child
Published on

ಬಾರಾಮತಿ (ಮಹಾರಾಷ್ಟ್ರ): ಮನೆಯಲ್ಲಿ ಮಕ್ಕಳು ಇರುವಾಗ ಮೈಯೆಲ್ಲಾ ಕಣ್ಣಾಗಿ ಇರಬೇಕು. ಮಕ್ಕಳು ಯಾವಾಗ ಏನು ಬೇಕಾದರೂ ಬಾಯೊಳಗೆ ಹಾಕಿಕೊಳ್ಳುವ ಅಪಾಯವಿದೆ. ಪಾಲಕರು ಅದನ್ನು ಗಮನಿಸದೇ ಹೋಗುವ ಕಾರಣ, ಎಷ್ಟೋ ಮಕ್ಕಳು ಜೀವ ಕಳೆದುಕೊಂಡಿರುವ ಉದಾಹರಣೆಗಳಿವೆ. ಅಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದಿದೆ. ಆದರೆ ಅದೃಷ್ಟವಶಾತ್​ ಮಗು ಬಚಾವಾಗಿದೆ.

ಆಗಿದ್ದೇನೆಂದರೆ, ಎಂಟು ತಿಂಗಳ ಪುಟಾಣಿ ಕಾರ್ತಿಕ್​ ಸಿಂಗ್​ ಇದ್ದಕ್ಕಿದ್ದಂತೆಯೇ ಅಮ್ಮನ ಎದೆಹಾಲು ಕುಡಿಯುವುದನ್ನು ನಿಲ್ಲಿಸಿಬಿಟ್ಟ. ಹಸಿವಿನಿಂದ ಅಳುತ್ತಿದ್ದನೇ ವಿನಾ ಹಾಲು ಕೊಟ್ಟರೆ ಕುಡಿಯುತ್ತಿರಲಿಲ್ಲ. ನಂತರ ಆತನಿಗೆ ತಿಂಡಿ ತಿನಿಸಲು ಮುಂದಾದರೂ ಅದನ್ನು ತಿನ್ನುತ್ತಿರಲಿಲ್ಲ. ಇದಕ್ಕೆ ಕಾರಣ ಮಾತ್ರ ಪಾಲಕರಿಗೆ ತಿಳಿಯಲೇ ಇಲ್ಲ. ಒಂದು ರೀತಿಯ ನೋವಿನಿಂದ ನರಳುತ್ತಿದ್ದ.

ಕೂಡಲೇ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಆರಂಭದಲ್ಲಿ ಕೆಲವೊಂದು ಮಾತ್ರೆ ನೀಡಲಾಗಿದೆ. ಏನೇ ಮಾಡಿದರೂ ಮಗು ಹಾಲು ಕುಡಿಯಲೂ ಇಲ್ಲ, ಅಳುವುದನ್ನು ನಿಲ್ಲಿಸಲೇ ಇಲ್ಲ. ಸ್ವಲ್ಪ ದಿನದಲ್ಲಿಯೇ ಉಸಿರಾಡಲೂ ಕಷ್ಟ ಪಟ್ಟ. ಇದರಿಂದ ಅಪ್ಪ-ಅಮ್ಮ ಗಾಬರಿಗೊಂಡರು.

ನಂತರ ಬೇರೊಬ್ಬ ವೈದ್ಯರ ಬಳಿ ಹೋದಾಗ ಹೊಟ್ಟೆಯಲ್ಲಿ ಏನೋ ಸಿಲುಕಿರಬಹುದು ಎಂದು ಅಂದುಕೊಂಡ ಅವರು ಎಕ್ಸ್​ರೇ ಮಾಡಿದಾಗ ಶಾಕ್​ ಆಗಿದ್ದಾರೆ. ಏಕೆಂದರೆ ಶ್ವಾಸಕೋಶದಲ್ಲಿ ಒಂದು ಗೋಲಾಕಾರದ ಚಿಕ್ಕ ವಸ್ತು ಕಂಡಿದೆ.

ನಂತರ ಇದೇನೆಂದು ನೋಡಿದಾಗ, ಅಲ್ಲಿ ಕಂಡದ್ದು ಅಮ್ಮನ ಕಾಲುಂಗುರ! ತಾಯಿಗೆ ಈ ಬಗ್ಗೆ ಕೇಳಿದಾಗ ಅವರು, ಹೌದು ನನ್ನ ಕಾಲುಂಗುರ ಇದ್ದಕ್ಕಿದ್ದ ಹಾಗೇ ಕಾಣೆಯಾಗಿತ್ತು. ಎಲ್ಲಿ ಹುಡುಕಾಡಿದರೂ ಸಿಗಲಿಲ್ಲ, ಎಲ್ಲೋ ಕಳೆದುಹೋಗಿರಬೇಕು ಎಂದುಕೊಂಡು ಸುಮ್ಮನಾಗಿದ್ದೆ, ಆದರೆ ಮಗು ಅದನ್ನು ಬಾಯೊಳಗೆ ಹಾಕಿಕೊಂಡದ್ದು ಗೊತ್ತೇ ಆಗಲಿಲ್ಲ ಎಂದರು. ಮಗು ಅಮ್ಮನ ಕಾಲ ಬಳಿ ಆಡುತ್ತಿದ್ದ ವೇಳೆ, ಗೊತ್ತಿಲ್ಲದೇ ಕಾಲುಂಗುರ ತೆಗೆದು ಅದನ್ನು ಬಾಯಿಗೆ ಹಾಕಿಕೊಂಡಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ವೈದ್ಯರು ಆಪರೇಷನ್ ಮಾಡಿ ಶ್ವಾಸನಾಳದಿಂದ ಕಾಲುಂಗುರವನ್ನು ಹೊರತೆಗೆದಿದ್ದಾರೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ! ಇನ್ನು ಸ್ವಲ್ಪ ದಿನ ಕಳೆದಿದ್ದರೆ ಆತನ ಜೀವಕ್ಕೇ ಅಪಾಯ ಆಗುವ ಸಾಧ್ಯತೆ ಇತ್ತು ಎಂದು ವೈದ್ಯರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net