

ರಾಜಾವರ್ (ಬಿಹಾರ): ಏಕಾಏಕಿಯಾಗಿ ಮನೆಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಒಂದೇ ಕುಟುಂಬ ಐದು ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯ ರಾಜಾವರ್ ಗ್ರಾಮದಲ್ಲಿ ನಡೆದಿದೆ.
ಅಡುಗೆ ಸಿಲಿಂಡರ್ ಸ್ಫೋಟದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ ಇದಕ್ಕೆ ನಿಖರ ಕಾರಣ ತಿಳಿದುಬಂದಿದೆ. ಸ್ಥಳದಲ್ಲಿ ಸಿಲಿಂಡರ್ ಸುಟ್ಟುಕರಕಲಾಗಿರುವುದು ಕಂಡುಬಂದಿದೆ. ಆದರೆ ಅದರ ಸ್ಫೋಟದಿಂದಲೇ ಈ ಘಟನೆ ಸಂಭವಿಸಿರುವುದು ಇನ್ನೂ ದೃಢಪಟ್ಟಿಲ್ಲ.
ಘಟನೆಯಲ್ಲಿ ಮೃತಪಟ್ಟವರನ್ನು ಅಂಕುಶ್ ಕುಮಾರ್ (10), ಶಿವಾನಿ ಕುಮಾರಿ (9), ಸೋನಿ ಕುಮಾರಿ (8), ಸೀಮಾ ಕುಮಾರಿ (5) ಮತ್ತು ಅಂಶುಕುಮಾರಿ (10) ಎಂದು ಗುರುತಿಸಲಾಗಿದೆ. ಇವರಲ್ಲಿ ಅಂಕುಶ್, ಶಿವಾನಿ, ಸೋನಿ, ಸೀಮಾ ಒಡಹುಟ್ಟಿದವರು. ಅಂಶುಕುಮಾರಿ ಈ ಮಕ್ಕಳ ಸಂಬಂಧಿಯಾಗಿದ್ದಾರೆ. ಮನೆಗೆ ಬೆಂಕಿ ಬಿದ್ದಾಗ ತಮ್ಮ ಮಕ್ಕಳನ್ನು ರಕ್ಷಿಸಲು ಅಶೋಕ್ ಪಸ್ವಾನ್ ಯತ್ನಿಸಿದ್ದು, ಇವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಅಗ್ನಿ ಅನಾಹುತಕ್ಕೆ ನಿಜವಾದ ಕಾರಣವೇನು ಎಂದು ತಿಳಿದುಬಂದಿಲ್ಲ. ಈ ಸ್ಥಳದಲ್ಲಿ ಒಂದು ಸುಟ್ಟು ಕರಕಲಾಗಿರುವ ಸಿಲಿಂಡರ್ ಗ್ಯಾಸ್ ಮತ್ತು ರೆಗ್ಯುಲೇಟರ್ ಸಿಕ್ಕಿದೆ. ಮನೆಯಲ್ಲಿ ಯಾವುದೇ ವಸ್ತುವೂ ಉಳಿದಿಲ್ಲ. ಎಲ್ಲವೂ ಸುಟ್ಟು ಬೂದಿಯಾಗಿದ್ದು, ಬೆಂಕಿ ಬಿದ್ದಿರುವ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಬಂಕಾ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.