ಶತ್ರು ರಾಷ್ಟ್ರಗಳ ದಾಳಿ ತಡೆಗೆ ಗಡಿಯಲ್ಲಿ ಲೋಕಾರ್ಪಣೆಗೊಂಡಿತು 44 ಸೇತುವೆ

bridge
Published on

ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ಗಡಿಗೆ ಹೊಂದಿಕೊಂಡಿರುವಂತೆ 44 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಇಂದು ಲೋಕಾರ್ಪಣೆ ಮಾಡಿದರು. ರಾಜನಾಥ ಸಿಂಗ್ ಅವರು ಆನ್‍ಲೈನ್ ಮೂಲಕ ಉದ್ಘಾಟಿಸಿದರು.

ಶತ್ರು ರಾಷ್ಟ್ರಗಳ ಗಡಿ ಪ್ರದೇಶಗಳಲ್ಲಿ ಈ ಸೇತುವೆಗಳನ್ನು ನಿರ್ಮಿಸಲಾಗಿದೆ. ಲಡಾಖ್​, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಜಮ್ಮು-ಕಾಶ್ಮೀರಗಳ ಗುಡ್ಡಗಾಡು ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಈ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ.

ಲಡಾಖ್​ನಲ್ಲಿ ನಿರ್ಮಿಸಿರುವ 7 ಸೇತುವೆಗಳು ಸೇರಿದಂತೆ ಎಲ್ಲಾ 44 ಬ್ರಿಡ್ಜ್‍ಗಳ ಮೂಲಕ ಸೇನಾ ಪಡೆಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ ಎಂದು ರಾಜನಾಥ ಸಿಂಗ್ ಹೇಳಿದರು.

ಇಷ್ಟು ವರ್ಷ ಪಾಕಿಸ್ತಾನದಿಂದ ಮಾತ್ರ ಆಂತರಿಕ ಭದ್ರತೆಗೆ ಅಪಾಯವಿತ್ತು. ಇದೀಗ ಪಾಕಿಸ್ತಾನ ಮಾತ್ರವಲ್ಲದೇ, ಚೀನಾದಿಂದಲೂ ದೇಶದ ಆಂತರಿಕ ಭದ್ರತೆಗೆ ಅಪಾಯವಿದೆ.

ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶದ ಮೇರೆಗೆ ಗಡಿ ಪ್ರದೇಶಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ವಿವರಣೆ ನೀಡಿದರು.

ಇವೆರಡು ದೇಶಗಳಿಂದ ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆಗಳನ್ನು ತಡೆಗಟ್ಟಲು ಸಾಧ್ಯವಾಗುವ ನಿಟ್ಟಿನಲ್ಲಿ ಸೇತುವೆಗಳನ್ನು ನಿರ್ಮಿಸಲಾಗಿದೆ. ಈ ಸೇತುವೆಗಳು ಕೇವಲ ಸೇನಾ ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಸಾರ್ವಜನಿಕರ ಪ್ರಯಾಣಕ್ಕೂ ಅನುಕೂಲವಾಗುವಂತೆ ಬಾರ್ಡರ್ ರೋಡ್ ಆರ್ಗನೈಸೇಷನ್ ಮೂಲಕ ನಿರ್ಮಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net