ಬಿಗಿ ಬಂದೋಬಸ್ತ್​ನಲ್ಲಿ ಕೋರ್ಟ್​ಗೆ ಹಾಜರಾಗಲಿರುವ ಹಾಥರಸ್​ ಕುಟುಂಬ- ಇಂದು ವಿಚಾರಣೆ

Hathras
Published on

ಲಖನೌ: ಹಾಥರಸ್‌ನಲ್ಲಿ ನಡೆದಿದೆ ಎನ್ನಲಾದ 19 ವರ್ಷದ ಯುವತಿಯ ಕುಟುಂಬಸ್ಥರು ಇಂದು ಬಿಗಿ ಭದ್ರತೆಯ ನಡುವೆ ಇಲ್ಲಿನ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದ ಎದುರು ಹಾಜರಾಗಲಿದ್ದಾರೆ.

ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಿ ರಾತ್ರಿಯಲ್ಲಿ ಪ್ರಯಾಣಿಸಲು ನಿರಾಕರಿಸಿದ್ದರಿಂದ ಸಂತ್ರಸ್ತೆಯ ಕುಟುಂಬ ಇಂದು ಬೆಳಗ್ಗೆ ಲಖನೌಗೆ ತೆರಳಿದಿದ್ದಾರೆ. ಸಂತ್ರಸ್ತೆಯ ತಂದೆ, ತಾಯಿ ಮತ್ತು ಮೂವರು ಸಹೋದರರು ಹಾಥರಸ್‌ನಿಂದ ಹೊರಟಿದ್ದು, ಮಧ್ಯಾಹ್ನದ ವೇಳೆಗೆ ಲಖನೌ ತಲುಪಲಿದ್ದಾರೆ.

ಜತೆಯಲ್ಲಿ ಮ್ಯಾಜಿಸ್ಟ್ರೇಟ್ ಅಂಜಲಿ ಗಂಗ್ವಾರ್ ಹಾಗೂ ಸರ್ಕಲ್‌ ಇನ್ಸ್‌ಪೆಕ್ಟರ್ ಇದ್ದಾರೆ ಎಂದು ಪ್ರಕರಣದ ನೋಡಲ್ ಅಧಿಕಾರಿ ಡಿಐಜಿ ಶಲಾಬ್‌ ಮಾಥೂರ್ ತಿಳಿಸಿದ್ದಾರೆ. ಕುಟುಂಬದ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಹತ್ರಾಸ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.

ಘಟನೆಯ ಕುರಿತು ತಮ್ಮ ಹೇಳಿಕೆ ನೀಡುವಂತೆ ಅಕ್ಟೋಬರ್ 1ರಂದು ನ್ಯಾಯಾಲಯ ಸಂತ್ರಸ್ತೆಯ ಕುಟುಂಬದವರಿಗೆ ತಿಳಿಸಿತ್ತು. ಜತೆಗೆ, ಸಂತ್ರಸ್ತೆಯ ಕುಟುಂಬದವರು ನ್ಯಾಯಾಲಯದ ಎದುರು ಹಾಜರಾಗಲು ಬೇಕಾದ ಪ್ರಯಾಣದ ವ್ಯವಸ್ಥೆ ಮಾಡಿಕೊಡುವಂತೆ ಹಾಥರಸ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.

ವಿಚಾರಣೆಯನ್ನು ವೈಯಕ್ತಿಕವಾಗಿ ನಡೆಸುವ ಸಾಧ್ಯತೆಯಿದೆ. ಮಧ್ಯಾಹ್ನ 2 ಗಂಟೆ ನಂತರ ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ರಾಜನ್ ರಾಯ್ ಅವರ ವಿಭಾಗೀಯ ಪೀಠದ ಎದುರು ಪ್ರಕರಣ ವಿಚಾರಣೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net