ಆರ್​ಆರ್​ ನಗರದ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಫಿಕ್ಸ್​- ಸಚಿವ ಸೋಮಶೇಖರ್​

RRnagar-BJP
Published on

ಬೆಂಗಳೂರು: ವಿಧಾನಸಭಾ ಉಪಚುನಾವಣೆಯಲ್ಲಿ ತೀವ್ರ ಕೂತುಹಲದ ಕ್ಷೇತ್ರವಾಗಿರುವ ರಾಜರಾಜೇಶ್ವರಿ ನಗರಕ್ಕೆ ಮಾಜಿ ಶಾಸಕ ಮುನಿರತ್ನಗೆ ಬಿಜೆಪಿ ಟಿಕೆಟ್​ ಫಿಕ್ಸ್​ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಪ್ರತಿಯೊಂದನ್ನು ಕೂಲಂಕಶವಾಗಿ ಪರಿಶೀಲಿಸಿ ತೀರ್ಮಾನಿಸುತ್ತದೆ. ಏನೇ ಆದರೂ ಮುನಿರತ್ನ ಅವರೇ ಅಭ್ಯರ್ಥಿಯಾಗುವುದು ಖಚಿತ ಎಂದು ಅವರು ಪತ್ರಕರ್ತರ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಮುನಿರತ್ನ ಅವರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ವದಂತಿಯನ್ನು ಹಬ್ಬಿಸುತ್ತಿದ್ದಾರೆ. ಇದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ. ನಾವೆಲ್ಲರೂ ಅವರಿಗೇ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದೇವೆ. ವರಿಷ್ಠರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ವರಿಷ್ಠರು ತೊಡಗಿಸಿಕೊಂಡ ಕಾರಣ ರಾಜ್ಯದ ಎರಡು ಉಪಚುನಾವಣೆಗೆ ಟಿಕೆಟ್ ಘೋಷಣೆ ಮಾಡಲು ವಿಳಂಬವಾಗಿದೆ, ಆದರೆ ಮುನಿರತ್ನ ಅವರಿಗೇ ಟಿಕೆಟ್​ ನೀಡುವುದು ಖಚಿತ ಎಂದು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ನಾನೂ ಸೇರಿದಂತೆ ಎಲ್ಲರಿಗೂ ಟಿಕೆಟ್ ನೀಡಿರುವಾಗ ಒಬ್ಬರಿಗೆ ಟಿಕೆಟ್ ಕೈ ತಪ್ಪಿಸಲು ಸಾಧ್ಯವಿಲ್ಲ. ಒಂದು ವೇಳೆ ಟಿಕೆಟ್ ನೀಡುವುದು ನನ್ನ ಕೈಯಲ್ಲಿದ್ದರೆ ನಾನು ಮುನಿರತ್ನ ಅವರನ್ನು ಅಭ್ಯರ್ಥಿ ಎಂದು ಘೋಷಿಸುತ್ತಿದ್ದೆ ಎಂದೂ ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಪಕ್ಷದ ಕೋರ್ ಕಮಿಟಿಯಲ್ಲಿ ನಡೆದ ನಿರ್ಧಾರದಂತೆ ಈ ಕ್ಷೇತ್ರದಿಂದ ಎರಡು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಏನೇ ಆದರೂ ಮುನಿರತ್ನ ಅಭ್ಯರ್ಥಿಯಾಗುವುದು ಖಚಿತ. ಯಾವ ಶಕ್ತಿಗಳೂ ಕೂಡ ಕೈ ತಪ್ಪಿಸಲು ಸಾಧ್ಯವಿಲ್ಲ ಎಂದು ಸುಧಾಕರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net