

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಬಿಗ್ ಶಾಕ್ ನೀಡಿದೆ. ಘನ ಹಾಗೂ ದ್ರವ ತ್ಯಾಜ್ಯದ ಉತ್ಪಾದನೆ ಹಾಗೂ ಸಂಸ್ಕರಣೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ ಇರುವುದಕ್ಕೆ ಸರ್ಕಾರಕ್ಕೆ ಮೂವರೆ ಸಾವಿರ ಕೋಟಿ ರೂ. ದಂಡ ವಿಧಿಸಿದೆ.
ಪಶ್ಚಿಮ ಬಂಗಾಳದ ನಗರ ಪ್ರದೇಶಗಳಲ್ಲಿ ದಿನಕ್ಕೆ 2,758 ಮಿಲಿಯನ್ ಲೀಟರ್ ಕೊಳಚೆ ಉತ್ಪಾದನೆಯಾಗುತ್ತಿದೆ. ಈ ಪೈಕಿ 1,505 ಮಿಲಿಯನ್ ಲೀಟರ್ನಷ್ಟು ಕೊಳಚೆ ಸಂಸ್ಕರಿಸುವ ಸಾಮರ್ಥ್ಯವಿದೆ. ಆದರೂ ದಿನಕ್ಕೆ 1,268 ಲೀಟರ್ ನಷ್ಟು ತ್ಯಾಜ್ಯವನ್ನು ಮಾತ್ರವೇ ಸಂಸ್ಕರಿಸಲಾಗುತ್ತಿದ್ದು, ಉಳಿದ 1,490 ಮಿಲಿಯನ್ ಲೀಟರ್ ನಷ್ಟು ತ್ಯಾಜ್ಯ ಹಾಗೆಯೇ ಉಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಿಡಿ ಕಾರಿರುವ ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ.ಗೋಯೆಲ್ ನೇತೃತ್ವದ ಪೀಠ ಈ ದಂಡ ವಿಧಿಸಿದೆ.
ಜನರಿಗಾಗಿ ಮಾಲಿನ್ಯ ಮುಕ್ತ ವಾತಾವರಣ ಕಲ್ಪಿಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಅದನ್ನು ಬಿಟ್ಟು ಈ ರೀತಿಯ ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ದಂಡ ಪಾವತಿಗೆ 2 ತಿಂಗಳ ಕಾಲಾವಕಾಶವನ್ನು ನ್ಯಾಯಮಂಡಳಿ ನೀಡಿದೆ.
2022-23ರ ಬಜೆಟ್ ಪ್ರಕಾರ ನಗರಾಭಿವೃದ್ಧಿ ಹಾಗೂ ಪುರಸಭೆಗಳ ವ್ಯವಹಾರದ ಭಾಗವಾಗಿ 12,818 ಕೋಟಿ ಅನುದಾನವಿದ್ದರೂ ರಾಜ್ಯ ಸರ್ಕಾರ ಒಳಚರಂಡಿ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡುತ್ತಿಲ್ಲ ಎಂದು ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿದೆ. ಭವಿಷ್ಯದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಗಮನಿಸಿ ಈ ಭಾರಿ ದಂಡವನ್ನು ವಿಧಿಸಲಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. (ಏಜೆನ್ಸೀಸ್)