

ತಿರುಪತಿ: ನಾಲ್ಕು ದಿನಗಳ ಹಿಂದಷ್ಟೇ ತಿರುಪತಿ ತಿಮ್ಮಪ್ಪನ ದೇವಾಲಯ ಒಂದೇ ದಿನ 10 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ದಾಖಲೆ ಬರೆದಿತ್ತು.
ಹಲವು ಟ್ರಸ್ಟ್ಗಳಿಂದ ತಿಮ್ಮಪ್ಪನಿಗೆ ಕಾಣಿಕೆಯಾಗಿ ಒಂದೇ ದಿನದಲ್ಲಿ 10 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಮಾಹಿತಿ ನೀಡಿತ್ತು. ಈ ಪೈಕಿ ತಮಿಳುನಾಡಿನ ತಿರುನಲ್ವೇಲಿಯ ಉದ್ಯಮಿ ಹಾಗೂ ತಿಮ್ಮಪ್ಪನ ಭಕ್ತ ಗೋಪಾಲ ಬಾಲಕೃಷ್ಣನ್ ಎಂಬುವವರಿಂದಲೇ 7 ಕೋಟಿ ರೂ. ಕಾಣಿಕೆ ನೀಡಿದ್ದು, ಇನ್ನುಳಿದ ಶ್ರೀ ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್ ಸೇರಿದಂತೆ ಇತರೆ ಎರಡು ಟ್ರಸ್ಟ್ಗಳು ತಲಾ 1 ಕೋಟಿ ರೂ. ಕಾಣಿಕೆ ನೀಡಿವೆ. ಹಾಗಾಗಿ ದಿನದಲ್ಲೇ 10 ಕೋಟಿ ರೂ. ಸಂಗ್ರಹವಾಗಿದೆ. ಈ ಅಷ್ಟೂ ಹಣವನ್ನು ಡಿಡಿ ಮೂಲಕ ಭಕ್ತರು ನೀಡಿದ್ದರು.
ಇದಾದ ನಾಲ್ಕೇ ದಿನಗಳಲ್ಲಿ ಒಬ್ಬಳೇ ಭಕ್ತಳಿಂದ ತಿಮ್ಮಪ್ಪನಿಗೆ 2.45 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಚೆನ್ನೈನ ವೃದ್ಧೆ ಭಕ್ತೆ ಸರೋಜಾ ಸೂರ್ಯ ನಾರಾಯಣನ್ ಈ ದೇಣಿಗೆ ನೀಡಿದ್ದಾರೆ.
ಚಿನ್ನದ ಕಾಸುಲಾ ಹಾರ ಮತ್ತು ಯಜ್ಞೋಪವೀತವನ್ನು ಕಾಣಿಕೆಯಾಗಿ ಭಕ್ತೆ ಸರೋಜಾ ಅವರು ನೀಡಿದ್ದಾರೆ. ಇವರು ನೀಡಿರುವ ರತ್ನ ಖಚಿತ ಆಭರಣಗಳು 4.150 ಕೆಜಿ ತೂಕದ್ದಾಗಿದ್ದು, ಇದರ ಮೌಲ್ಯ 2.45 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.