ಚಿತ್ರದುರ್ಗದಲ್ಲೊಂದು ಅಮಾನವೀಯ ಘಟನೆ- ವಿದ್ಯಾರ್ಥಿನಿಯ ಬಟ್ಟೆ ಎಳೆದಾಡಿದ ಕಾಮುಕರು: ಮನನೊಂದು ಆತ್ಮಹತ್ಯೆ

chitradurga
Published on

ಚಿತ್ರದುರ್ಗ: ವಿದ್ಯಾರ್ಥಿನಿಯೊಬ್ಬಳ ಬಟ್ಟೆಯನ್ನು ಎಳೆದು ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣವಾಗಿರುವ ಆಘಾತಕಾರಿ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೋಡಿಹಳ್ಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ.

17 ವರ್ಷದ ವಿದ್ಯಾರ್ಥಿನಿ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿದ್ಯಾರ್ಥಿನಿಗೆ ಕೆಲವು ಕಿಡಿಗೇಡಿಗಳು ದಿನವೂ ಕಿರುಕುಳ ನೀಡುತ್ತಿದ್ದರು. ಈ ಹಿಂದೆ ಹೀಗೆ ಮಾಡದಂತೆ ಗ್ರಾಮಸ್ಥರು ಯುವಕರಿಗೆ ಎಚ್ಚರಿಕೆ ಕೂಡ ನೀಡಿದ್ದರು. ಆದರೂ ಅದೇ ಕಿಡಿಗೇಡಿತನವನ್ನು ಅವರು ಮುಂದುವರೆಸಿದ್ದರು.

ಮೊನ್ನೆ ವಿದ್ಯಾರ್ಥಿನಿಯ ಬಟ್ಟೆಯನ್ನು ಎಳೆದಾಡಿ ಹಿಂಸೆ ನೀಡಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಕೆಯ ಶವವನ್ನು ಆಸ್ಪತ್ರೆಯಿಂದ ಪಡೆಯಲು ನಿರಾಕರಿಸಿದ ಪಾಲಕರು ಮತ್ತು ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕಿಡಿಗೇಡಿಗಳನ್ನು ಬಂಧಿಸುವವರೆಗೂ ಶವವನ್ನು ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ತರೀಕೆರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಸುಮಾರು ಆರು ಗಂಟೆ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ನಂತರ ಚಿತ್ರದುರ್ಗ ಎಸ್ಪಿ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಮನವೊಲಿಸಿದರು. ನಂತರ ಪ್ರತಿಭಟನೆ ವಾಪಸ್‌ ಪಡೆಯಲಾಯಿತು.

ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net