ರಷ್ಯಾದ ಸಸ್ಯಾಹಾರ ಪ್ರಚಾರಕಿ ಹಸಿವಿನಿಂದ ಸಾವು!; ಅನೇಕ ವರ್ಷಗಳಿಂದ ಸಂಪೂರ್ಣವಾಗಿ ಹಸಿಯಾದ ಆಹಾರ ಸೇವನೆ ಮಾಡುತ್ತಿದ್ದ ಯುವತಿ

Russian Vegan
Published on

ನವದೆಹಲಿ: ಪ್ರಖ್ಯಾತ ಸಸ್ಯಾಹಾರ ಪ್ರಚಾರಕಿ, ರಷ್ಯಾದ ಝುನ್ನಾ ಸಮ್ಸೋನೋವಾ ಮೃತಪಟ್ಟಿರುವುದು ಜಗತ್ತಿನಾದ್ಯಂತದ ಕೇವಲ ತರಕಾರಿ, ಸೊಪು್ಪ-ಸದೆ ತಿನ್ನಬೇಕೆಂಬ ಸಸ್ಯಾಹಾರ ಆಂದೋಲನದ (ವೆಗಾನ್) ಕಾರ್ಯಕರ್ತರಿಗೆ ಆಘಾತವುಂಟು ಮಾಡಿದೆ. ಸಸ್ಯಾಹಾರ ಕುರಿತ ಅತಿಯಾದ ವ್ಯಾಮೋಹವೇ ಝುನ್ನಾ ಸಾವಿಗೆ ಕಾರಣವಾಗಿದ್ದು ಅವರ ಅಗಲಿಕೆಯಿಂದ ಹಲವು ಪಾಠಗಳನ್ನು ಕಲಿಯಬೇಕಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಷ್ಯಾದ 39 ವರ್ಷದ ಝುನ್ನಾ ಜುಲೈ 21ರಂದು ನಿಧನರಾಗಿದ್ದಾರೆ. ಸಸ್ಯಾಧಾರಿತ ಆಹಾರ ಸೇವನೆಯ ಕಟ್ಟಾ ಪ್ರತಿಪಾದಕಿ ಹಾಗೂ ಪ್ರಚಾರಕಿಯಾಗಿದ್ದ ಝುನ್ನಾ, ಹಸಿವಿನಿಂದ ಸತ್ತಿದ್ದಾರೆ ಎಂದು ಹೇಳಲಾಗಿದೆ. ಅವರು ಅನೇಕ ವರ್ಷಗಳಿಂದ ಸಂಪೂರ್ಣವಾಗಿ ಕಚ್ಚಾ ಸಸ್ಯಾಹಾರ ಸೇವನೆ ಮಾಡಿ ಜೀವಿಸುತ್ತಿದ್ದರು. ಆದರೆ, ಜಗತ್ತಿನಾದ್ಯಂತ ಸಸ್ಯಾಹಾರಿಗಳಿಗೆ ಸ್ಪೂರ್ತಿಯಾಗಿದ್ದ ಝುನ್ನಾರ ಹಠಾತ್ ಸಾವಿನಿಂದ ಕೇವಲ ವೆಗಾನ್ ಜೀವನ ಶೈಲಿಯಿಂದ ಒದಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ಚಿಂತನೆ ನಡೆಸುವ ಅಗತ್ಯ ಎದುರಾಗಿದೆ.

ವೆಗಾನ್ ಆಹಾರ ಪದ್ಧತಿ ಕೆಲವು ವ್ಯಕ್ತಿಗಳಿಗೆ ತುಂಬಾ ಪ್ರಯೋಜನಕಾರಿ ಎನಿಸಿದರೂ ಅದರಿಂದ ಕೆಲವು ಅನಾನುಕೂಲಗಳೂ ಇದ್ದು ಅದರ ಬಗ್ಗೆ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ. ಪೌಷ್ಟಿಕತೆ ಕೊರತೆ, ಜೀರ್ಣ ಸಮಸ್ಯೆ, ಕಡಿಮೆ ಶಕ್ತಿ, ತೂಕ ಬದಲಾವಣೆ ಅಲ್ಲದೆ ಸಾಮಾಜಿಕ ಸವಾಲುಗಳು ಕೂಡ ಸಸ್ಯಾಹಾರದಿಂದ ಉದ್ಭವಿಸುತ್ತವೆ. ಆಹಾರ ಪದ್ಧತಿಯಿಂದ ಮಾಂಸಾಹಾರವನ್ನು ದೂರವಿಡುವುದರಿಂದ ವಿಟಮಿನ್ ಬಿ12 ಮತ್ತು ವಿಟಮಿನ್ ಡಿ ಯಂಥ ಪ್ರಮುಖ ಜೀವಸತ್ವಗಳು ಮತ್ತು ಕ್ಯಾಲ್ಶಿಯಂ ಹಾಗೂ ಕಬ್ಬಿಣದಂಥ ಖನಿಜಗಳ ಕೊರತೆ ದೇಹವನ್ನು ಕಾಡುತ್ತದೆ. ಫೈಬರ್ ಸೇವನೆ ಹೆಚ್ಚಳದಿಂದ ಸಸ್ಯಾಹಾರಿಗಳಲ್ಲಿ ಹೊಟ್ಟೆ ಉಬ್ಬುವಿಕೆ ಮತ್ತು ಗ್ಯಾಸ್​ನಂಥ ಜೀರ್ಣ ಸಮಸ್ಯೆಗಳು ಕಾಡುತ್ತವೆ. ಆಗಾಗ ಊಟವನ್ನೂ ಮಾಡುವುದರಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ಸಾಮಾಜಿಕ ಸಮಸ್ಯೆ: ಪಾರ್ಟಿಗಳಲ್ಲಿ ಸಾಮಾನ್ಯವಾಗಿ ಸಸ್ಯಾಹಾರೇತರ ಊಟದ ವ್ಯವಸ್ಥೆಯಿರುವುದರಿಂದ ಅಲ್ಲಿ ಸಮಸ್ಯೆ ಎದುರಿಸಬಹುದಾಗಿದ್ದು ಇದು ವೆಗಾನ್​ಗಳಿಗೆ ಸಾಮಾಜಿಕ ಸವಾಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net