

ಮಾಸ್ಕೋ: ಕರೊನಾ ನಿಗ್ರಹಕ್ಕಾಗಿ ವಿಶ್ವದಲ್ಲಿಯೇ ಮೊದಲ ಲಸಿಕೆ ಸಿದ್ಧಪಡಿಸಿ, ತನ್ನ ದೇಶದಲ್ಲಿ ನೋಂದಣಿ ಮಾಡಿಸಿರುವ ರಷ್ಯಾದ ನಡವಳಿಕೆ ಬಗ್ಗೆ ಪ್ರಮುಖ ರಾಷ್ಟ್ರಗಳು ಸಂದೇಹ ವ್ಯಕ್ತಪಡಿಸಿವೆ. ಆದರೆ, ಇದಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.
ಕೋವಿಡ್ ಲಸಿಕೆಯನ್ನು ಸ್ಪುಟ್ನಿಕ್ ಉಪಗ್ರಹದ ನೆನಪಿನಲ್ಲಿ ಸ್ಪುಟ್ನಿಕ್ ವಿ ಎಂದು ಹೆಸರಿಸಿದೆ ಸಚಿವ ಕಿರಿಲ್ ಡಿಮಿಟ್ರಿಯೇವ್ ತಿಳಿಸಿದ್ದಾರೆ. ಜತೆಗೆ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಬುಧವಾರ ( ಆಗಸ್ಟ್ 12) ಆರಂಭವಾಗಲಿದೆ ಹಾಗೂ ಬೃಹತ್ ಪ್ರಮಾನದಲ್ಲಿ ಲಸಿಕೆ ಉತ್ಪಾದನೆ ಕಾರ್ಯಕ್ಕೆ ಸೆಪ್ಟೆಂಬರ್ನಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಗಾಮೇಲಿಯಾ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ರಷ್ಯನ್ ವಿದೇಶಗಳಿಂದಲೂ ಭಾರಿ ಬೇಡಿಕೆ ವ್ಯಕ್ತವಾಗಿದೆ. ಆರಂಭಿಕ ಹಂತದಲ್ಲಿ 20 ದೇಶಗಳು 100 ಕೋಟಿ ಡೋಸ್ಗೆ ಬೇಡಿಕೆ ಸಲ್ಲಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿದೇಶಗಳ ಸಹಭಾಗಿತ್ವದಲ್ಲಿ ಐದು ದೇಶಗಳಲ್ಲಿ ಪ್ರತಿವರ್ಷ 50 ಕೋಟಿ ಡೋಸ್ ಲಸಿಕೆಗಳನ್ನು ಉತ್ಪಾದಿಸಲು ರಷ್ಯಾ ಸಿದ್ಧವಿದೆ ಎಂದು ಡಿಮಿಟ್ರಿಯೇವ್ ಘೋಷಿಸಿದ್ದಾರೆ.
ಮಾಧ್ಯಮಗಳಲ್ಲಿ ಅತ್ಯಂತ ಯೋಜಿತ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವ ದಾಳಿಗಳು ರಷ್ಯಾದ ಮನ್ನಣೆಯನ್ನು ಕಸಿಯುವ ಯತ್ನಗಳಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಗಾಗಿ ಅಮೆರಿಕ ಹಾಗೂ ಸೋವಿಯತ್ ರಷ್ಯಾ ನಡುವೆ ಇದ್ದ ಸಹಕಾರವನ್ನು ಸ್ಮರಿಸಿದ ಡಿಮಿಟ್ರಿಯೇವ್, ರಷ್ಯಾದೊಮದಿಗೆ ರಚನಾತ್ಮಕ ಮಾತುಕತೆಯಲ್ಲಿ ತೊಡಗಿ, ತನ್ನ ಪ್ರಜೆಗಳಿಗೆ ಭವಿಷ್ಯದಲ್ಲಿ ಅತ್ಯುನ್ನತ ಗುಣಮಟ್ಟದ, ಮಹಾಮಾರಿಯಿಂದ ಕಾಪಾಡುವ ಲಸಿಕೆ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.