ಯೂಕ್ರೇನ್ ಮೇಲೆ ರಷ್ಯಾ ಮಿಸೈಲ್ ಮಳೆ; ಮೂಲಸೌಕರ್ಯ ಟಾರ್ಗೆಟ್ 120ಕ್ಕೂ ಹೆಚ್ಚು ಕ್ಷಿಪಣಿಗಳಿಂದ ದಾಳಿ

8752
Published on

ಕಿಯೆವ್: ಯೂಕ್ರೇನ್ ಮೇಲೆ ರಷ್ಯಾ ಗುರುವಾರ ಮತ್ತೆ ಭಾರಿ ಕ್ಷಿಪಣಿ ದಾಳಿ ನಡೆಸಿದೆ. ಯೂಕ್ರೇನ್​ನ ಹಲವು ಪ್ರದೇಶಗಳ ಮೇಲೆ 120 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾವಣೆ ಮಾಡಿದ್ದು, ರಾಜಧಾನಿ ಕಿಯೆವ್ ಸೇರಿ ದಂತೆ ಹಲವು ನಗರಗಳಲ್ಲಿ ಸ್ಪೋಟಗಳು ಕೇಳಿಬಂದಿವೆ.

ದಾಳಿಯಲ್ಲಿ 14 ವರ್ಷದ ಬಾಲಕಿ ಸೇರಿದಂತೆ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯೂಕ್ರೇನ್​ನ ಮೂಲಸೌಕರ್ಯ ಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ಅತಿ ದೊಡ್ಡ ದಾಳಿ ಇದಾಗಿದೆ. ಆಯಕಟ್ಟಿನ ವಿಮಾನಗಳು ಮತ್ತು ಹಡಗುಗಳಿಂದ ವಾಯು ಮತ್ತು ಸಮುದ್ರ ಆಧಾರಿತ ಕ್ರೂಸ್ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಮುನ್ನ ರಷ್ಯಾ, ರಾತ್ರೋರಾತ್ರಿ ಆಯ್ದ ಪ್ರದೇಶಗಳಿಗೆ ಸ್ಪೋಟಕ ಡ್ರೋನ್​ಗಳನ್ನು ರವಾನಿಸಿದೆ ಎಂದು ಯೂಕ್ರೇನ್ ವಾಯುಪಡೆ ವರದಿ ಮಾಡಿದೆ. ಕಿಯೆವ್ ಮತ್ತು ರ್ಖಾವ್ ಪಟ್ಟಣಗಳ ಮೇಲೆ ದಾಳಿ ನಡೆಸಿರುವ ಕ್ಷಿಪಣಿಗಳು ಹಲವು ಕಟ್ಟಡಗಳ ಮೇಲೆ ಬಿದ್ದಿವೆ. ಪರಿಣಾಮ ಪಶ್ಚಿಮ ವಲಯದ ನಗರಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.

ರಷ್ಯಾ ವಾಯು ಮತ್ತು ಜಲ ಮಾರ್ಗಗಳ ಮೂಲಕ ಯೂಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಯೂಕ್ರೇನ್ ಸೈನ್ಯ ಎಚ್ಚರಿಕೆ ನೀಡಿದೆ. ಕ್ಷಿಪಣಿ ದಾಳಿ ಬೆನ್ನಲ್ಲೇ ಕಿಯೇವ್, ಝೈಟೊಮಿರ್ ಮತ್ತು ಒಡೆಸಾದಲ್ಲಿ ಸ್ಪೋಟಗಳು ಕೇಳಿಬಂದಿವೆ. ಮೂಲ ಸೌಕರ್ಯಕ್ಕೆ ಸಂಭವನೀಯ ಹಾನಿ ಕಡಿಮೆ ಮಾಡುವ ಉದ್ದೇಶದಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ವನ್ನು ಘೋಷಿಸಲಾಗಿದೆ. ಯೂಕ್ರೇನ್ ಶಾಂತಿ ಯೋಜನೆಯನ್ನು ಕ್ರೆಮ್ಲಿನ್ ತಿರಸ್ಕರಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಶಾಂತಿ ಯೋಜನೆ:
ಯೂಕ್ರೇನ್​ನ ಪ್ರಾದೇಶಿಕ ಸಮಗ್ರತೆ ಗೌರವಿಸಬೇಕು. ಸೈನ್ಯವನ್ನು ರಷ್ಯಾ ವಾಪಸ್ ಕರೆಸಿಕೊಳ್ಳಬೇಕು ಸೇರಿ 10 ಅಂಶಗಳ ಶಾಂತಿ ಯೋಜನೆಯನ್ನು ಯೂಕ್ರೇನ್ ಅಧ್ಯಕ್ಷ ಝೆಲೆನ್ಸಕಿ ಮುಂದಿಟ್ಟಿದ್ದಾರೆ. ಆದರೆ ಇದನ್ನು ರಷ್ಯಾತಳ್ಳಿ ಹಾಕಿದೆ. ಯೂಕ್ರೇನ್​ನ ನಾಲ್ಕು ಪ್ರದೇಶಗಳಾದ ಲುಹಾನ್, ಡೊನೆಟ್, ಖೆರ್ಸನ್ ಮತ್ತು ಜಪೋರಿ ಝಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಕಿಯೆವ್ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಯಾವುದೇ ಶಾಂತಿ ಯೋಜನೆ ಸಾಧ್ಯವಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

54 ಕ್ಷಿಪಣಿ ಧ್ವಂಸ

ರಷ್ಯಾ ಉಡಾಯಿಸಿದ 69 ಕ್ಷಿಪಣಿಗಳಲ್ಲಿ 54ನ್ನು ಹೊಡೆದುರುಳಿಸಲಾಗಿದೆ ಎಂದು ಯೂಕ್ರೇನ್​ನ ಕಮಾಂಡರ್-ಇನ್ ಚೀಫ್ ಜನರಲ್ ವ್ಯಾಲೆರಿ ಜಲುಜಿ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯಲ್ಲಿ ರಷ್ಯಾ ಒಟ್ಟು 69 ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಹೇಳಲಾಗಿತ್ತು. ನಂತರ 120ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಯೂಕ್ರೇನ್ ಅಧ್ಯಕ್ಷರ ಸಹಾಯಕ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net