

ತಮಿಳುನಾಡು: ದಿನಗಳು ಕಳೆದಂತೆ ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅಭಿನಯದ ಬಹುನಿರೀಕ್ಷಿತ 'ಲಿಯೋ' ಸಿನಿಮಾ ಸದ್ಯ ಹೊಚ್ಚ ಹೊಸ ಪೋಸ್ಟರ್ಗಳ ಮುಖೇನ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದ್ದು, ಸಿನಿಮಾದ ರನ್‌ಟೈಮ್ ಅನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.
'ಲಿಯೋ' ಸಿನಿಮಾದ ಪ್ರಚಾರದ ಕೆಲಸಗಳು ಸದ್ಯ ಬಿರುಸಿನಿಂದ ಸಾಗುತ್ತಿದ್ದು, ವಿಜಯ್ ಅವರ ಆಕರ್ಷಕ ಪೋಸ್ಟರ್ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವು ಇದೇ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಲಿಯೋ ಸಿನಿಮಾದ ರನ್‌ಟೈಮ್ 2 ಗಂಟೆ 39 ನಿಮಿಷಗಳ ಕಾಲ ಇರಲಿದೆ ಎಂದು ಚಿತ್ರತಂಡ ತಿಳಿಸಿದ್ದು, ಇದು ಪರಿಪೂರ್ಣ ಅವಧಿಯಾಗಿದೆ. ಸಿನಿಮಾ ಬಿಡುಗಡೆಗೊಂಡ ನಂತರ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗಳಿಗೂ ಮೀರಿ ದಾಖಲೆಯನ್ನು ಬರೆಯಲಿದೆ ಎಂಬ ಸುದ್ದಿ ಸದ್ಯ ಕಾಲಿವುಡ್ ಅಂಗಳದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಎಸ್.ಎಸ್. ಲಲಿತ್ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್, ಸೂರ್ಯ, ಅರ್ಜುನ್ ಸರ್ಜಾ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).