

ತಮಿಳುನಾಡು: ಕಾಲಿವುಡ್ನ ಹೆಸರಾಂತ ನಟ, ಸಂಗೀತ ಸಂಯೋಜಕ ವಿಜಯ್ ಆಂಟೋನಿ ಅವರ ಪುತ್ರಿ ಮೀರಾ ಕೆಲವು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾದರು. ತಮ್ಮ ಕುಟುಂಬಸ್ಥರು, ಸ್ನೇಹಿತರು, ಪ್ರೀತಿ-ಪಾತ್ರರನ್ನು ಕಿರಿ ವಯಸ್ಸಿನಲ್ಲಿ ಅಗಲಿದ ಮೀರಾ ನೆನೆದು ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.
ತಮ್ಮ ಪುತ್ರಿಯರಾದ ಲಾರಾ ಮತ್ತು ಮೀರಾ ಇಬ್ಬರ ಪೈಕಿ ಕಿರಿಯ ಮಗಳಾದ ಮೀರಾ ಶೈಕ್ಷಣಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರಿಂದ ಆತ್ಮಹತ್ಯೆಗೆ ಶರಣಾಗುವ ಮೂಲಕ ಇಹಲೋಕ ತ್ಯಜಿಸಿದರು. ಅನಿರೀಕ್ಷಿತ ದುರಂತ ನಡೆದ ಕೆಲ ದಿನಗಳ ಬಳಿಕ ಇದೇ ಮೊದಲ ಬಾರಿಗೆ ವಿಜಯ್ ತಮ್ಮ ಮಗಳನ್ನು ನೆನೆದು ಭಾವನಾತ್ಮಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ, "ಪ್ರೀತಿಯ ಜನರೇ, ನನ್ನ ಮಗಳು ತುಂಬ ಧೈರ್ಯವಂತೆ ಮತ್ತು ಪ್ರೀತಿಸುವ ಗುಣದವಳು. ಜಾತಿ, ಧರ್ಮ, ತಾರತಮ್ಯ, ಹಣ, ಅಸೂಯೆ, ನೋವು ಮತ್ತು ದುರುದ್ದೇಶಗಳಿಲ್ಲದ ಉತ್ತಮ ಸ್ಥಳಕ್ಕೆ ನನ್ನ ಪುತ್ರಿ ತೆರಳಿದ್ದಾಳೆ. ಅವಳು ನನ್ನೊಂದಿಗೆ ಮಾತನಾಡುವುದನ್ನು ಎಂದಿನಂತೆ ಮುಂದುವರಿಸುತ್ತಾಳೆ" ಎಂದು ಬರೆದಿದ್ದಾರೆ.
"ಅವಳೊಂದಿಗೆ ನಾನೂ ಕೂಡ ಮೃತಪಟ್ಟಿದ್ದೇನೆ. ಈಗ ನನ್ನ ಮಗಳ ಜತೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ. ಇಂದಿನಿಂದ, ನಾನು ಕೈಗೊಳ್ಳುವ ಎಲ್ಲಾ ಒಳ್ಳೆಯ ಕಾರ್ಯಗಳು ಅವಳಿಗೋಸ್ಕರ ಮಾಡುವೆ, ಆ ಕಾರ್ಯವನ್ನು ಅವಳೇ ಮಾಡಿಸುತ್ತಾಳೆ" ಎಂದು ಭಾವನಾತ್ಮಕವಾಗಿ ಬರೆದು ಪೋಸ್ಟ್ ಮಾಡಿದ್ದಾರೆ,(ಏಜೆನ್ಸೀಸ್).