ಪಾಳುಬಿದ್ದ ಭೋವಿ ಸಮುದಾಯ ಭವನ

bhavana
ಬೀರೂರಿನ ಅಂಬೇಡ್ಕರ್ ನಗರದಲ್ಲಿರುವ ಅಂಬೇಡ್ಕರ್ ಭವನ ಹಾಳುಬಿದ್ದಿರುವುದು.
Published on

ಬೀರೂರು: ಸಾಮಾಜಿಕ, ಸಾಂಸ್ಕೃತಿಕ ಉದ್ದೇಶಕ್ಕೆ ನಿರ್ಮಾಣ ಮಾಡುವ ಸಮುದಾಯ ಭವನಗಳು ಕೆಲವೆಡೆ ಬಳಕೆಯಾದರೆ, ಬಹುಪಾಲು ಭವನಗಳು ನಿರ್ವಹಣೆ ಕೊರತೆಯಿಂದ ಪಾಳುಬೀಳುತ್ತಿವೆ.

ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಸಮುದಾಯಗಳಿಗಾಗಿ ಅಂಬೇಡ್ಕರ್ ಭವನ ನಿರ್ಮಿಸಲಾಗುತ್ತಿದೆ. ಆದರೆ ಜನರ ಬಳಕೆಯಿಂದ ದೂರ ಸರಿದಿರುವ ಸಮುದಾಯ ಭವನಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ನಿರ್ಮಾಣದ ಸಮಯದಲ್ಲಿ ಹೆಚ್ಚು ಒತ್ತು ನೀಡಿ ಉದ್ಘಾಟನೆಗೊಂಡ ಬಳಿಕ ಬಳಕೆ ಕಡಿಮೆಯಾಗಿ ಸುಣ್ಣ-ಬಣ್ಣ ಕಾಣದೆ, ಗಿಡಗಂಟಿಗಳು ಬೆಳೆದುಕೊಂಡು ವಿಷಜಂತುಗಳ ವಾಸಸ್ಥಾನವಾಗುವ ಪರಿಸ್ಥಿತಿ ಎದುರಾಗಿದೆ.
ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ಮೂರು ಸಮುದಾಯ ಭವನಗಳಿದ್ದು ಅವುಗಳಲ್ಲಿ ಒಂದು ಸುವ್ಯವಸ್ಥೆಯಲ್ಲಿದ್ದರೆ, ಅಂಬೇಡ್ಕರ್ ನಗರದಲ್ಲಿ 20 ವರ್ಷಗಳ ಹಿಂದೆ ನಿರ್ಮಿಸಿದ ಅಂಬೇಡ್ಕರ್ ಸಮುದಾಯ ಭವನ, ರಾಷ್ಟ್ರೀಯ ಕೊಳಚೆ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಭೋವಿ ಸಮುದಾಯಕ್ಕೆ ನಿರ್ಮಿಸಿದ ಸಂತೆ ಮೈದಾನದೊಳಗಿನ ಸಮುದಾಯ ಭವನಗಳು ಹಾಳುಬಿದ್ದಿವೆ.
ಅಂಬೇಡ್ಕರ್ ನಗರದ ಭೋವಿ ಸಮುದಾಯ ಭವನವನ್ನು ಕಾರ್ಯಕ್ರಮಕ್ಕೆ ಬಳಸದೆ ಕಾಂಪೌಂಡ್ ಕೂಡ ಬಂದ್ ಮಾಡದೆ ನಿರ್ಲಕ್ಷಿಸಲಾಗಿದೆ. ಒಂದು ಭಾಗದ ಕಟ್ಟಡದಲ್ಲಿ ಶ್ರೀ ಮೈಲಾರಲಿಂಗಸ್ವಾಮಿ ದೇವರಿಗೆ ಬಿಟ್ಟಿರುವ ಬಸವನನ್ನು ಕಟ್ಟಲಾಗುತ್ತಿದೆ.
ಲಿಂಗದಹಳ್ಳಿ ರಸ್ತೆಯ ಎಸ್.ಎಂ.ಕೃಷ್ಣ ಸಮುದಾಯ ಭವನ, ಇಂದಿರಾನಗರದ ಸಮುದಾಯ ಭವನ ಹಾಗೂ ಅಂಜುಮಾನ್ ಮೊಹಲ್ಲಾ ಬಳಿ ಇರುವ ಸಮುದಾಯ ಭವನಗಳು ತಕ್ಕಮಟ್ಟಿಗೆ ಉತ್ತಮವಾಗಿದ್ದು ಕುಡಿಯುವ ನೀರು, ಶೌಚಗೃಹ ಸೇರಿ ಸೌಲಭ್ಯಗಳ ಕೊರತೆಯಲ್ಲೂ ಅಲ್ಲಿನ ಜನರು ಬಳಸಿಕೊಳ್ಳತ್ತಿದ್ದಾರೆ.
ಅಂಬೇಡ್ಕರ್ ಸಮುದಾಯ ಭವನವನ್ನು ಕೆಲ ದಿನಗಳವರೆಗೆ ಅಂಗನವಾಡಿ ಕೇಂದ್ರವಾಗಿ ಬಳಸಿಕೊಳ್ಳಲಾಗಿತ್ತು. ಅಂಗನವಾಡಿಗೆ ಸ್ವಂತ ಕಟ್ಟಡವಾದ ತಕ್ಷಣ ಸ್ಥಳಾಂತರಿಸಲಾಯಿತು. ನಂತರ ಚುನಾವಣಾ ಸಂದರ್ಭದಲ್ಲಿ ಮಾತ್ರ ಮತಗಟ್ಟೆ ಕೇಂದ್ರವಾಗಿರುವುದು ಬಿಟ್ಟರೆ ಉಳಿದಂತೆ ಹಾಳುಬಿದ್ದ ಪರಿಸ್ಥಿತಿಯಲ್ಲೇ ಇದ್ದರೂ ಜನಪ್ರತಿನಿಧಿಗಳಾಗಲೀ ಸ್ಥಳೀಯ ಸಂಸ್ಥೆ ಅಧಿಕಾರಿಗಳಾಗಲಿ ಗಮನಹರಿಸುತ್ತಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳು ವ್ಯರ್ಥವಾಗುತ್ತಿವೆ.
ಪರಿಶಿಷ್ಟ ಸಮುದಾಯಗಳೇ ಇರುವ ಬಡಾವಣೆಯಲ್ಲಿ ಜ್ಞಾನಾರ್ಜನೆಗಾಗಿ 2011ರಲ್ಲಿ ಅಂಬೇಡ್ಕರ್ ಭವನವನ್ನು ಗ್ರಂಥಾಲಯವನ್ನಾಗಿಸಲು ಪ್ರಯತ್ನ ಮಾಡಲಾಗಿತ್ತು. ಅದಕ್ಕೆ ಬೇಕಾದ 75 ಲಕ್ಷ ರೂ. ಮೊತ್ತದ ಪೀಠೋಪಕರಣ ಹಾಗೂ 25 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿತ್ತು. ಅದು ಇಂದಿಗೂ ಸರಸ್ವತಿಪುರಂ ಪ್ರಾಥಮಿಕ ಶಾಲೆಯಲ್ಲಿ ಕೊಳೆಯುತ್ತಿದೆ. ಕಟ್ಟಡವನ್ನು ವ್ಯವಸ್ಥಿತಗೊಳಿಸಿದಲ್ಲಿ ಅವುಗಳನ್ನೆಲ್ಲ ತಂದು ಉತ್ತಮವಾದ ಗ್ರಂಥಾಲಯ ತೆರೆಯಬಹುದು.
ಸಮುದಾಯ ಭವನಗಳನ್ನು ಸಮಾಜ ಕಲ್ಯಾಣ ಇಲಾಖೆ ನಿರ್ಮಿಸಿ ಪುರಸಭೆಗೆ ಹಸ್ತಾಂತರ ಮಾಡಿದರೂ ಸ್ಥಳೀಯರು ಸೂಕ್ತವಾಗಿ ಬಳಸಿಕೊಳ್ಳದಿದ್ದಲ್ಲಿ ಕಟ್ಟಡಗಳು ಹಾಳುಬೀಳುತ್ತವೆ. ಸದಸ್ಯರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅನುದಾನ ಮೀಸಲಿರಿಸಿ ಅಭಿವೃದ್ಧಿಪಡಿಸಲಾಗುವುದು. ಗ್ರಂಥಾಲಯ ತೆರೆಯಲು ಒತ್ತು ನೀಡಲಾಗುವುದು. ಸರ್ಕಾರಿ ಸೌಲಭ್ಯ ಬಳಸಿಕೊಳ್ಳುವ ಜ್ಞಾನ ಬೆಳೆಸಿಕೊಳ್ಳಬೇಕು ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಎ.ಡಿ.ಶಾಂತಲಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net