ಕದ್ದ ವಾಹನಕ್ಕೂ ನೋಂದಣಿ! ಗುಜರಿ ಲಾರಿ, ಬಸ್ಸುಗಳಿಗೆ ಹೊಸ ರಿಜಿಸ್ಟ್ರೇಷನ್ | ಆರ್​ಟಿಒ ಸಿಬ್ಬಂದಿ ಶಾಮೀಲು

School Bus
Published on

ಕೀರ್ತಿನಾರಾಯಣ ಸಿ.
ಬೆಂಗಳೂರು: ಬಳಕೆಗೆ ಯೋಗ್ಯವಲ್ಲದ ಗುಜರಿ ಹಾಗೂ ಕಳವಾಗಿರುವ ಲಾರಿ, ಬಸ್ಸುಗಳಿಗೆ ಆರ್​ಟಿಒ ಕಚೇರಿಗಳಲ್ಲಿ ನೋಂದಣಿ ಮಾಡಿಕೊಡುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಹೊರರಾಜ್ಯಗಳಿಂದ ಕರ್ನಾಟಕಕ್ಕೆ ವರ್ಗಾವಣೆಗೊಳಿಸುವ ನೆಪದಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಈ ಅಕ್ರಮ ನಡೆಸಲಾಗುತ್ತಿದೆ. ಇದೊಂದು ಅಂತಾರಾಜ್ಯ ದಂಧೆಯಾಗಿದ್ದು, ಖಾಸಗಿ ವಾಹನ ಮಾರಾಟ ಡೀಲರ್​ಗಳ ಜತೆ ಕರ್ನಾಟಕ, ನಾಗಾಲ್ಯಾಂಡ್ ಹಾಗೂ ಅರುಣಾಚಲ ಪ್ರದೇಶಗಳ ಆರ್​ಟಿಒ ಅಧಿಕಾರಿ ಮತ್ತು ಸಿಬ್ಬಂದಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

ನಾಗಾಲ್ಯಾಂಡ್ ಹಾಗೂ ಅರುಣಾಚಲ ಪ್ರದೇಶ ಆರ್​ಟಿಒ ಕಚೇರಿಯಿಂದ ವಾಹನ ವರ್ಗಾವಣೆಗೆ ವಿತರಣೆಯಾಗಿರುವ ನಕಲಿ ನಿರಾಕ್ಷೇಪಣಾ ಪತ್ರ (ಎನ್​ಒಸಿ)ಗಳನ್ನು ಆಧರಿಸಿ ಬೆಂಗಳೂರು ಹಾಗೂ ಕೋಲಾರ ಆರ್​ಟಿಒ ಕಚೇರಿಗಳಲ್ಲಿ ಕರ್ನಾಟಕ ನಂಬರ್​ಗೆ ರಿಜಿಸ್ಟ್ರೇಷನ್ ಆಗಿ, ನಂತರ ಮರು ಮಾರಾಟವಾಗಿ ಮಂಡ್ಯ, ಅಥಣಿ, ಚಿತ್ರದುರ್ಗ, ಬೆಂಗಳೂರು ಕೇಂದ್ರ, ಬಂಟ್ವಾಳ ಮತ್ತು ಹಾಸನ ಆರ್​ಟಿಒ ಕಚೇರಿಗಳಲ್ಲಿ ಟ್ರಾನ್ಸ್​ಫರ್ ಆಗಿವೆ. 2023ರ ಜನವರಿಯಿಂದ ಈವರೆಗೆ ಗೂಡ್ಸ್ ಲಾರಿಗಳು ಹಾಗೂ ಶೈಕ್ಷಣಿಕ ಬಳಕೆಯ ಬಸ್ಸುಗಳ ಹೆಸರಲ್ಲಿ 2,000ಕ್ಕೂ ಅಧಿಕ ವಾಹನಗಳು ನೋಂದಣಿಯಾಗಿವೆ. ಇದರಲ್ಲಿ ಅಂದಾಜು 1,000ಕ್ಕೂ ಅಧಿಕ ವಾಹನಗಳು ನಾಲ್ಕೈದು ಜನರಿಗೆ ಮರು ಮಾರಾಟವಾಗಿವೆ. ಯಾವುದೇ ರಾಜ್ಯದಿಂದ ವಾಹನದ ನೋಂದಣಿ ಕರ್ನಾಟಕಕ್ಕೆ ವರ್ಗಾವಣೆಯಾಗಿ, ನಿಯಮಾನುಸಾರ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಇಲ್ಲಿನ ನಂಬರ್ ಸಿಗಬೇಕಾದರೆ ಕನಿಷ್ಠ 30 ದಿನ ಬೇಕು. ಆದರೆ, ಭೌತಿಕವಾಗಿ ವಾಹನ ಗಳನ್ನು ಪರಿಶೀಲನೆ ಮಾಡದೆಯೇ ಒಂದೇ ದಿನದಲ್ಲಿ ಕರ್ನಾಟಕದ ನಂಬರ್ ಕೊಟ್ಟು ನೋಂದಣಿ ಪ್ರಕ್ರಿಯೆ ಮುಗಿಸಲಾಗುತ್ತಿದೆ.

ಈ ರಿಜಿಸ್ಟ್ರೇಷನ್ ದಂಧೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ‘ವಿಜಯವಾಣಿ’ ಸಂಗ್ರಹಿಸಿದೆ. ಸಾರಿಗೆ ಇಲಾಖೆ ಈ ಪ್ರಕರಣವನ್ನು ಸಿಐಡಿ ಅಥವಾ ಲೋಕಾಯುಕ್ತ ತನಿಖೆಗೆ ಒಪ್ಪಿಸಿದರೆ ಸೋರಿಕೆಯಾಗಿರುವ ಕೋಟ್ಯಂತರ ರೂ. ರಸ್ತೆ ತೆರಿಗೆ ವಸೂಲಿಯಾಗುವ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯ.

ಚೆನ್ನೈನಲ್ಲಿ ಕಳವು, ಸ್ಕ್ರಾಪ್ ಆದ ಲಾರಿ ಇಲ್ಲಿ ಬಸ್!

ಆಂಧ್ರಪ್ರದೇಶದಲ್ಲಿ ನೋಂದಣಿಯಾಗಿ, ಚೆನ್ನೈನಲ್ಲಿ ಕಳವಾಗಿ, ಅಕ್ಕಿ ಸ್ಮಗ್ಲಿಂಗ್​ನಲ್ಲಿ ಸಿಕ್ಕಿಬಿದ್ದು, ರಾಜಸ್ಥಾನದಲ್ಲಿ ಚಾಸ್ಸಿ ಫ್ರಾಡ್ ಕೇಸ್​ನಲ್ಲಿ ಸಿಕ್ಕಿಬಿದ್ದ ಲಾರಿಯೊಂದು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಆರ್​ಟಿಒದಲ್ಲಿ ಶೈಕ್ಷಣಿಕ ಸಂಸ್ಥೆಯ ಬಸ್ ಎಂದು ಮರು ನೋಂದಣಿಯಾಗಿ, ಕೋಲಾರ ಆರ್​ಟಿಒ ಕಚೇರಿ ಮೂಲಕ ವರ್ಗಾವಣೆಯಾಗಿ ಓಡಾಡುತ್ತಿದೆ. 2017 ಫೆ.6ರಂದು ಆಂಧ್ರಪ್ರದೇಶದಿಂದ ಎಪಿ-27 ಎಸ್​ವಿ-7082 ಸಂಖ್ಯೆಯ ವಾಹನ ಎನ್​ಒಸಿ ಬಂದಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಆರ್​ಟಿಒದಲ್ಲಿ ಕೆಎ51-ಎಎ-7247 ಸಂಖ್ಯೆ ಮರು ನೋಂದಣಿಯಾಗುತ್ತದೆ. ಆದರೆ, ವಾಸ್ತವದಲ್ಲಿ ಎಪಿ-27 ಎಸ್​ವಿ-7082 ಸಂಖ್ಯೆಯ ಸರಣಿ ಆಂಧ್ರದಲ್ಲಿ ಆರಂಭವೇ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 2012, 2015 ಹಾಗೂ 2016 ಫೆ.6ರಂದು ಇದೇ ವಾಹನ ಕಳವಾಗಿದೆ ಎಂದು ರಾಜಸ್ಥಾನದಲ್ಲಿ ಹಾಗೂ 2015 ಜ.21ರಂದು ತಮಿಳುನಾಡಿನಲ್ಲಿ ಕಳುವಾಗಿದೆ ಎಂದು ಎಫ್​ಐಆರ್ ಆಗಿದೆ. 2012 ಡಿ.7ರಂದು ಚೆನ್ನೈನಲ್ಲಿ ಪಡಿತರ ಸ್ಮಗ್ಲಿಂಗ್ ವೇಳೆ ವಾಹನ ಜಪ್ತಿ ಮಾಡಿ, ಅಲ್ಲೂ ಎಫ್​ಐಆರ್ ಆಗಿದೆ. ಇದಲ್ಲದೆ 2012 ಏ.12ರಂದು ಬೆಂಕಿ ಅಪಘಾತವಾಗಿರುವ ಬಗ್ಗೆಯೂ ದೂರು ದಾಖಲಾಗಿದೆ. ಇದೇ ರೀತಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಲಾರಿಯೊಂದು ಕರ್ನಾಟಕದ ಆರ್​ಟಿಒದಲ್ಲಿ ಮರು ನೋಂದಣಿಯಾಗಿ ಸ್ಕೂಲ್ ಬಸ್ ಆಗಿ ಸಂಚರಿಸುತ್ತಿದೆ.

ಅಕ್ರಮ ಹೇಗೆ?

  • ಜಪ್ತಿ, ಕಳವು, ಬಳಕೆಯಲ್ಲಿಲ್ಲದ ವಾಹನಗಳಿಗೆ ಅಧಿಕೃತ ನಂಬರ್ ನೀಡಿ ಮಾರಾಟ.
  • ಅರುಣಾಚಲ ಪ್ರದೇಶ, ಇನ್ನಾವುದೇ ರಾಜ್ಯಕ್ಕೆ ಸೇರಿದ ವಾಹನ ಟ್ರಾನ್ಸ್​ಫರ್​ಗೆ ಅರ್ಜಿ.
  • ಎನ್​ಒಸಿ ಕೊಡಲು ಅರುಣಾಚಲಪ್ರದೇಶ ಆರ್​ಟಿಒ ಕಚೇರಿಗೆ -ಠಿ;2 ಲಕ್ಷ ಕೊಡಲಾಗುತ್ತದೆ.
  • ಯಾವುದೋ ನಂಬರ್ ಹಾಕಿ ವಾಹನ್-4 ತಂತ್ರಾಂಶದಲ್ಲಿ ಎನ್​ಒಸಿ ಅಪ್​ಲೋಡ್.
  • ಇಂಜಿನ್, ಚಾಸ್ಸಿ ನಂಬರ್ ಅಳಿಸಿ, ಇನ್ನೊಂದು ನಂಬರ್​ನಲ್ಲಿ ನೋಂದಣಿ.
  • ಇಂಜಿನ್, ಚಾಸ್ಸಿ ನಂಬರ್ ಅಳಿಸಿ ಲಾರಿಯ ನಂಬರ್​ನಲ್ಲೇ ಬಸ್ ಎಂದು ನೋಂದಣಿ.
  • ಶಾಲಾ-ಕಾಲೇಜು ಬಸ್ ಹೆಸರಲ್ಲಿ ನೋಂದಣಿ ಮಾಡಿದ ನಂತರ ಇನ್ನೊಬ್ಬರಿಗೆ ಮಾರಾಟ.

ಲಕ್ಷ ಲಕ್ಷ ರೂ. ಲೂಟಿ

ಹೊರರಾಜ್ಯದ ಆರ್​ಟಿಒಗೆ 2 ಲಕ್ಷ, ಆರ್​ಟಿಒಗೆ 10 ಸಾವಿರ, ಕೇಸ್ ವರ್ಕರ್​ಗೆ 5 ಸಾವಿರ, ಸೂಪರಿಂಟೆಂಡೆಂಟ್​ಗೆ 5 ಸಾವಿರ ಹಾಗೂ ಇನ್​ಸ್ಪೆಕ್ಟರ್​ಗೆ 4 ಸಾವಿರ ರೂ.ನಂತೆ ಅಂದಾಜು 2.24 ಲಕ್ಷ ರೂ. ಕೊಟ್ಟು ಬಳಕೆಗೆ ಯೋಗ್ಯವಲ್ಲದ ವಾಹನಕ್ಕೆ ಮರು ನೋಂದಣಿ ಮಾಡಿಸಿ 15 ರಿಂದ 20 ಲಕ್ಷ ರೂ.ವರೆಗೆ ಮಾರಾಟ ಮಾಡಿ ಲಕ್ಷ ಲಕ್ಷ ರೂ. ಲೂಟಿ ಮಾಡುವುದೇ ದಂಧೆಯಾಗಿದೆ ಎಂದು ಅಧಿಕಾರಿಗಳೇ ಹೇಳುತ್ತಾರೆ.

ಅಸ್ತಿತ್ವದಲ್ಲಿಲ್ಲದ ಶಾಲೆ ಹೆಸರಲ್ಲಿ ನೋಂದಣಿ?

ಅರುಣಾಚಲ ಪ್ರದೇಶದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎನ್ನಲಾದ ಶಾಲೆಯೊಂದರ ಹೆಸರಿನಲ್ಲಿರುವ 15ಕ್ಕೂ ಹೆಚ್ಚು ಬಸ್​ಗಳು ಇತ್ತೀಚೆಗೆ ಕರ್ನಾಟಕಕ್ಕೆ ವರ್ಗಾವಣೆಯಾಗಿವೆ. ಕೆಎ-07 ಬಿ-5744ರಿಂದ ಕೆಎ-07 ಬಿ-6071 ಸಂಖ್ಯೆವರೆಗೆ ಮರು ನೋಂದಣಿ ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಯಮಬದ್ಧ ಪ್ರಕ್ರಿಯೆ ಹೇಗೆ?

ಯಾವುದೇ ಆರ್​ಟಿಒ ಕಚೇರಿಯಿಂದ ಎನ್​ಒಸಿ ಬಂದರೆ ಅದು ಅಸಲಿಯೋ ನಕಲಿಯೋ ಎಂದು ಅಲ್ಲಿಂದ ವರದಿ ಕೇಳಬೇಕು. ? ಚಾಸ್ಸಿ ನಂಬರ್, ಇಂಜಿನ್ ನಂಬರ್, ಇನ್ಶುರೆನ್ಸ್, ವಾಹನ ಮಾಲೀಕರ ವಿವರಗಳನ್ನು ಪಡೆದು ಖಚಿತತೆ ಪಡೆದುಕೊಳ್ಳಬೇಕು. ? ಎನ್​ಒಸಿಯಲ್ಲಿರುವ ಎಲ್ಲ ಮಾಹಿತಿ ಸರಿಯೆಂದು ಖಚಿತವಾದ ನಂತರವೇ ನಂಬರ್ ಕೊಡಬೇಕು.

ನಾಗಾಲ್ಯಾಂಡ್ ಟು ಮಂಡ್ಯ

2019 ಫೆ.15ರಂದು ನೋಂದಣಿಯಾಗಿರುವ ಎನ್​ಎಲ್06-ಎ-5277 ಗೂಡ್ಸ್ ಲಾರಿ, ಕೆಎ07-ಬಿ-6092 ಸಂಖ್ಯೆಯಲ್ಲಿ 2023ರ ಮಾ.15ರಿಂದ ಕೋಲಾರ ಆರ್​ಟಿಒದಲ್ಲಿ ಮರು ನೋಂದಣಿಯಾಗಿ, ಮಂಡ್ಯ ಆರ್​ಟಿಒಗೆ ವರ್ಗಾವಣೆಗೊಂಡು ಈಗ ಅಲ್ಲಿ ಸಂಚರಿಸುತ್ತಿದೆ. 2019ರಲ್ಲಿ ನೋಂದಣಿಯಾಗಿರುವ ವಾಹನಕ್ಕೆ ಇನ್ಸುರೆನ್ಸ್ ಮಾಡಿಸಿರುವ ಯಾವ ದಾಖಲಾತಿಯನ್ನೂ ಕೊಟ್ಟಿಲ್ಲ. ಟ್ಯಾಕ್ಸ್ ಪಾವತಿ ಬಗ್ಗೆ ಮಾಹಿತಿ ಇಲ್ಲ. 2025ರ ಫೆ.14ರವರೆಗೂ ಫಿಟ್​ನೆಸ್ ಸರ್ಟಿಫಿಕೇಟ್ ಕೊಡಲಾಗಿದೆ.

ಹೊಸಕೋಟೆ ಬಳಿ ಪಾರ್ಕಿಂಗ್

ರಾಜ್ಯದ ಬೇರೆ ಬೇರೆ ಆರ್​ಟಿಒಗಳಲ್ಲಿ ನೋಂದಣಿ ಮಾಡಿಸಿದ ಬಸ್​ಗಳನ್ನು ಹೊಸಕೋಟೆ ಬಳಿ ಇರುವ ಯಾರ್ಡ್​ನಲ್ಲಿ ರ್ಪಾಂಗ್ ಮಾಡಲಾಗಿದೆ ಎಂಬ ಮಾಹಿತಿ ಇದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಶಾಲಾ-ಕಾಲೇಜು ನಡೆಸುವವರು ಸೆಕೆಂಡ್ ಹ್ಯಾಂಡ್ ಬಸ್​ಗಳು ಬೇಕಾದರೆ ಇಲ್ಲಿನವರನ್ನೇ ಸಂರ್ಪಸಿ ಖರೀದಿಸುತ್ತಾರೆ.

ಕಾಲೇಜು ಹೆಸರಲ್ಲಿ ನೋಂದಣಿ

ಮುಳಬಾಗಿಲಿನಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ ಮೆಡಿಕಲ್ ಕಾಲೇಜು ಹೆಸರಲ್ಲಿ 14 ಬಸ್​ಗಳು ಇತ್ತೀಚೆಗಷ್ಟೇ ನೋಂದಣಿಯಾಗಿವೆ. ಪಿಯು ಕಾಲೇಜು ಹಾಗೂ ಪ್ರೌಢಶಾಲೆಯ ಹೆಸರಲ್ಲೂ 15 ಬಸ್​ಗಳನ್ನು ಮರು ನೋಂದಣಿ ಮಾಡಿಕೊಡಲಾಗಿದೆ.

ತೆರಿಗೆ ಲಾಸ್, ಜೀವಕ್ಕೂ ಕುತ್ತು!

  • ಅಕ್ರಮ ನೋಂದಣಿ ದಂಧೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ತೆರಿಗೆ ನಷ್ಟ. ಜತೆಗೆ ಜನರ ಜೀವಕ್ಕೂ ಕುತ್ತು.
  • ಬಳಕೆಗೆ ಯೋಗ್ಯವಲ್ಲದ ವಾಹನಕ್ಕೆ ಯಾವುದೋ ಇಂಜಿನ್ ಅಳವಡಿಸುವುದರಿಂದ ವಾಹನ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು
  • ಶಾಲಾ-ಕಾಲೇಜು ಬಸ್​ಗಳಾಗಿ ವಿದ್ಯಾರ್ಥಿಗಳನ್ನು ಕರೆದೊಯ್ಯು ವುದರಿಂದ ಜೀವಕ್ಕೆ ಸಂಚಕಾರ ಭೀತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net