

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಮೊದಲ ಸುತ್ತಿನ ಸೀಟು ಹಂಚಿಕೆ ಸೋಮವಾರ ನಡೆದಿದ್ದು, ಒಟ್ಟು 7,596 ಮಕ್ಕಳಿಗೆ ಸೀಟು ಲಭ್ಯವಾಗಿದೆ. ಸೀಟು ಲಭ್ಯವಾದ ಮಕ್ಕಳ ಶಾಲಾ ದಾಖಲಾತಿಗೆ ಏ.16ರವರೆಗೆ ಕಾಲಾವಕಾಶ ನೀಡಲಾಗಿದೆ.
ಆರ್‌ಟಿಇ ಲಭ್ಯವಾದ ಸೀಟುಗಳು ಹಂಚಿಕೆಯಾಗಿರುವ ಮಕ್ಕಳ ಪಾಲಕರ ನೋಂದಾಯಿತ ಮೊಬೈಲ್ಫೋನ್ ಸಂಖ್ಯೆಗೆ ತಮ್ಮ ಮಗುವಿಗೆ ಯಾವ ಶಾಲೆಯಲ್ಲಿ ಸೀಟು ದೊರೆತಿದೆ ಎಂಬ ಮಾಹಿತಿಯನ್ನು ಕಳುಹಿಸಲಾಗಿದೆ. ಸೀಟು ದೊರೆತಿರುವ ಮಕ್ಕಳನ್ನು ಆಯಾ ಪಾಲಕರು ನಿಗದಿತ ಶಾಲೆಗೆ ಏ.4ರಿಂದ 16ರವರೆಗೆ ದಾಖಲಾತಿ ಮಾಡಿಸಬಹುದು.
ದಾಖಲಾತಿಗೆ ತೆರಳುವಾಗ ಇಲಾಖೆಯ ವೆಬ್ಸೈಟ್ http://www.schooleducation.kar.nic.in ನಲ್ಲಿ ಲಭ್ಯವಿರುವ ಸೀಟು ಹಂಚಿಕೆ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಹೋಗಬೇಕೆಂದು ಎಂದು ಸೂಚಿಸಿದೆ.
ಇದನ್ನೂ ಓದಿ: ಪಲ್ಟಿಯಾದ ಕಾರು, ತಂದೆ-ಮಗ ಸ್ಥಳದಲ್ಲೇ ಸಾವು..
ಈ ಬಾರಿ ವಿವಿಧ ಅನುದಾನಿತ ಖಾಸಗಿ ಶಾಲೆಗಳಲ್ಲಿ 16,675 ಸೀಟು, ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ 2,048 ಸೀಟು ಸೇರಿ ಒಟ್ಟು 18,723 ಸೀಟುಗಳು ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಲಭ್ಯವಿದ್ದವು. ಒಟ್ಟು 2,407 ಶಾಲೆಗಳಲ್ಲಿ ಎಲ್‌ಕೆಜಿಗೆ 1031, 1ನೇ ತರಗತಿಗೆ 17,691 ಸೀಟುಗಳು ಪ್ರವೇಶಕ್ಕೆ ಲಭ್ಯವಿದ್ದವು. ಈ ಸೀಟುಗಳ ಪ್ರವೇಶಕ್ಕೆ 20,414 ಅರ್ಜಿಗಳು ಬಂದಿದ್ದವು. ಇದರಲ್ಲಿ 696 ಅರ್ಜಿಗಳನ್ನು ವಿವಿಧ ಕಾರಣದಿಂದ ಅನರ್ಹಗೊಳಿಸಲಾಗಿತ್ತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.