ಇನ್ನೂ ಸಾರ್ವಜನಿಕರ ಬಳಿ... 2000 ರೂ. ನೋಟಿನ ವಿಚಾರವಾಗಿ ಪ್ರಮುಖ ಅಪ್​ಡೇಟ್​ ನೀಡಿದ ಆರ್​ಬಿಐ! RBI

RBI
Published on

ನವದೆಹಲಿ: ಪ್ರಸ್ತುತ ಚಾಲ್ತಿಯಲ್ಲಿರದ 2000 ರೂಪಾಯಿ ನೋಟುಗಳ ಬಗ್ಗೆ ಭಾರತೀಯ ರಿಸರ್ವ್​ ಬ್ಯಾಂಕ್​ ( RBI ) ಮಹತ್ವದ ಅಪ್‌ಡೇಟ್ ನೀಡಿದೆ. 2023, ಮೇ 19 ರಂದು ಗುಲಾಬಿ ಬಣ್ಣದ 2000 ರೂಪಾಯಿ ನೋಟುಗಳನ್ನು ಆರ್​ಬಿಐ ಅಮಾನ್ಯಗೊಳಿಸಿತು. ಆದರೆ, ಈ ನೋಟುಗಳು ಇನ್ನೂ ಸಾರ್ವಜನಿಕರಿಂದ ಸಂಪೂರ್ಣವಾಗಿ ನಮಗೆ ತಲುಪಿಲ್ಲ ಎಂದು ಆರ್​ಬಿಐ ಹೇಳಿದೆ.

ಮೂರು ವರ್ಷಗಳಿಗೂ ಹೆಚ್ಚು ಕಾಲಾವಕಾಶದ ನಂತರವೂ, 5,817 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಇನ್ನೂ ಸಾರ್ವಜನಿಕರ ಬಳಿಯಲ್ಲೇ ಇವೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿಕೆಯ ಪ್ರಕಾರ, ಶೇ. 98.37 ರಷ್ಟು ನೋಟುಗಳು ಅಮಾನ್ಯೀಕರಣದ ನಂತರ ಬ್ಯಾಂಕುಗಳಿಗೆ ಮರಳಿವೆ. ಆದರೆ, ಇನ್ನೂ ಶೇ. 1.63 ರಷ್ಟು ನೋಟುಗಳು ಆರ್‌ಬಿಐಗೆ ಬಂದಿಲ್ಲ. ಅಮಾನ್ಯೀಕರಣದ ಸಮಯದಲ್ಲಿ ಒಟ್ಟು 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಇದ್ದವು. 2025, ಅಕ್ಟೋಬರ್ 31ರ ಹೊತ್ತಿಗೆ, ನೋಟುಗಳ ಮೌಲ್ಯ 5,817 ಕೋಟಿ ರೂಪಾಯಿಗೆ ಇಳಿದಿದೆ ಎಂದು ಆರ್​ಬಿಐ ತಿಳಿಸಿದೆ. ಅಂದಹಾಗೆ, ರಿಸರ್ವ್ ಬ್ಯಾಂಕ್ ಹಿಂತೆಗೆದುಕೊಂಡಿದ್ದರು ಕೂಡ 2,000 ರೂಪಾಯಿ ನೋಟುಗಳು ಈಗಲೂ ಕಾನೂನುಬದ್ಧವಾಗಿ ಮಾನ್ಯವಾಗಿವೆ.

2016 ನವೆಂಬರ್​ 8ರಂದು ನೋಟು ಅಮಾನ್ಯೀಕರಣ ಮಾಡಿದ ನಂತರ, ಕೇಂದ್ರ ಸರ್ಕಾರ ಹೊಸ 2000 ರೂ. ನೋಟುಗಳನ್ನು ಪರಿಚಯಿಸಿತು. ನವೆಂಬರ್ 2016 ರಲ್ಲಿ, ಈ ಹೊಸ 2000 ರೂ. ನೋಟುಗಳನ್ನು ಆರ್‌ಬಿಐ ಕಾಯ್ದೆಯ ಸೆಕ್ಷನ್ 24 (1) ರ ಅಡಿಯಲ್ಲಿ ನೀಡಲಾಯಿತು. ನೋಟು ಅಮಾನ್ಯೀಕರಣದ ನಂತರ ಉದ್ಭವಿಸಿದ ಅಗತ್ಯಗಳನ್ನು ಪೂರೈಸಲು 2000 ರೂ. ನೋಟುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಆರ್‌ಬಿಐ ಹೇಳಿತ್ತು.

ಮಾರುಕಟ್ಟೆಯಲ್ಲಿ ಇತರ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಗೆ ಬಂದ ನಂತರ 2018-19 ರಲ್ಲಿ 2000 ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಿರುವುದಾಗಿ ಆರ್‌ಬಿಐ ಹೇಳಿತು. ನಂತರ, ಮಾರುಕಟ್ಟೆಯಲ್ಲಿ 2000 ರೂ. ನೋಟುಗಳ ಸಂಖ್ಯೆ ಕ್ರಮೇಣ ಕಡಿಮೆಯಾಯಿತು. ಇದಕ್ಕೂ ಮುನ್ನ ಅಂದರೆ, 2017, ಮಾರ್ಚ್ ತಿಂಗಳವರೆಗೆ ಆರ್‌ಬಿಐ 2000 ರೂ. ನೋಟುಗಳಲ್ಲಿ 89 ಪ್ರತಿಶತವನ್ನು ಚಲಾವಣೆಗೆ ಬಿಡುಗಡೆ ಮಾಡಿತ್ತು. ಆದರೆ, 2023, ಮೇ 19 ರಂದು ಆರ್‌ಬಿಐ 2000 ರೂ. ನೋಟುಗಳನ್ನು ರದ್ದುಗೊಳಿಸಿತು. ಮತ್ತೊಂದೆಡೆ, ಆರ್‌ಬಿಐ 2000 ರೂ. ನೋಟುಗಳನ್ನು ಚಲಾವಣೆ ಮಾಡದಂತೆ ಆದೇಶಗಳನ್ನು ಹೊರಡಿಸಿದೆ. ಆದರೆ, 2000 ರೂ. ನೋಟು ಮಾತ್ರ ಇನ್ನು ಮಾನ್ಯವಾಗಿದೆ. ಅದನ್ನು ಬ್ಯಾಂಕ್​ಗೆ ಹಿಂತಿರುಗಿಸಿ ಹಣ ಪಡೆದುಕೊಳ್ಳಲು ಅವಕಾಶವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net