

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಯುವತಿಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದನ್ನು ಪ್ರಶ್ನಿಸಿದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಮೇಲೆ ಮೂವರು ಅಪರಿಚಿತ ಯುವಕರು ಹಲ್ಲೆ ನಡೆಸಿದ್ದಾರೆ.
ಆರ್‌ಪಿಎಫ್ ಸಿಬ್ಬಂದಿ ಕಿರಣ್ ಕುಮಾರ್ ಗುರ್ಜಾರ್ (30) ಹಲ್ಲೆಗೊಳಗಾದವರು. ಅವರು ಜೂ. 2ರಂದು ರಾತ್ರಿ ಪಾಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ರಾತ್ರಿ 1 ಗಂಟೆಯಲ್ಲಿ ರೈಲು ನಿಲ್ದಾಣದ ಟಿಕೆಟ್ ಬುಕ್ಕಿಂಗ್ ಕೌಂಟರ್ ಸಮೀಪ ಮೂವರು ಯುವಕರು ಇಬ್ಬರು ಯುವತಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ನಿಲ್ದಾಣದಿಂದ ಹೊರ ಹೋಗುವಂತೆ ಸೂಚಿಸಿದ್ದರು.
ಕೂಡಲೇ ಯುವತಿಯರು ಸ್ಥಳದಿಂದ ಹೊರ ಹೋಗಿದ್ದರು. ಆದರೆ, ಮೂವರು ಯುವಕರು ಆರ್‌ಪಿಎಫ್ ಸಿಬ್ಬಂದಿ ಜತೆ ಜಗಳ ತೆಗೆದಿದ್ದರು. ಈ ಪೈಕಿ ಓರ್ವ ಯುವಕ ತನ್ನ ಬಳಿ ಇದ್ದ ಚೂರಿಯಿಂದ ಸಿಬ್ಬಂದಿ ಮೇಲೆ ಇರಿಯಲು ಯತ್ನಿಸಿದ್ದು, ಪರಿಣಾಮ ಕೈಗೆ ಗಾಯವಾಗಿದೆ. ಹಲ್ಲೆ ವೇಳೆ ಆರ್‌ಪಿಎಫ್ ಸಿಬ್ಬಂದಿ ಕೂಗಿಕೊಂಡಿದ್ದು, ಇತರೆ ಸಿಬ್ಬಂದಿ ಧಾವಿಸುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ದಾವೂದ್ ಇಬ್ರಾಹಿಂ ಮತ್ತು ಪತ್ನಿಗೆ ಕೋವಿಡ್ 19 ಸೋಂಕು?
ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಆರೋಪಿಗಳ ಮುಖಚಹರೆ ಗುರುತಿಸಲಾಗಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.