ದಾವೂದ್ ಇಬ್ರಾಹಿಂ ಮತ್ತು ಪತ್ನಿಗೆ ಕೋವಿಡ್​ 19 ಸೋಂಕು?

dawood
Published on

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿ ಮೆಹಜಬಿನ್​ಗೆ ಕೋವಿಡ್​ 19 ಸೋಂಕು ದೃಢಪಟ್ಟಿದೆ. ದಾವೂದ್​ನ ಪರ್ಸನಲ್ ಸ್ಟಾಫ್​ ಮತ್ತು ಗಾರ್ಡ್​ಗಳನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಎನ್ನುತ್ತಿವೆ ಮಾಧ್ಯಮ ವರದಿಗಳು.

ಪಾಕ್​ ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಮಾಧ್ಯಮಗಳು, ಕರೊನಾ ಸೋಂಕು ಕುರಿತ ವಿವರಗಳನ್ನು ಒದಗಿಸುತ್ತ ದಾವೂದ್ ವಿಚಾರವನ್ನು ಸುದ್ದಿ ಮಾಡಿವೆ. ದಾವೂದ್​ ಮತ್ತು ಪತ್ನಿಯನ್ನು ಕರಾಚಿಯಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಅಂಶಗಳುಳ್ಳ ಸುದ್ದಿ ಮಧ್ಯಾಹ್ನದಿಂದ ವೈರಲ್ ಆಗಿತ್ತು.

ಈ ನಡುವೆ, ಶುಕ್ರವಾರ ಮುಸ್ಸಂಜೆ ವೇಳೆಗೆ ಐಎಎನ್​​ಎಸ್​ಗೆ ನಿಗೂಢ ಸ್ಥಳದಿಂದ ದಾವೂದ್ ಸಹೋದರ ಅನೀಸ್​ ಇಬ್ರಾಹಿಂ ಕರೆ ಮಾಡಿದ್ದು, ದಾವೂದ್​ ಮತ್ತು ಆತನ ಪತ್ನಿಗೆ ಕೋವಿಡ್ 19 ಸೋಂಕು ತಗುಲಿಲ್ಲ. ಎಲ್ಲರೂ ಕ್ಷೇಮವಾಗಿದ್ದಾರೆ. ಯಾರೋ ಸುಳ್ಳು ಸುದ್ದಿ ಹರಡಿದ್ದಾರೆ. ಯುಎಇ ಮತ್ತು ಪಾಕಿಸ್ತಾನದಲ್ಲಿ ನಮ್ಮ ವ್ಯಾಪಾರ ವಹಿವಾಟುಗಳು ಎಂದಿನಂತೆಯೇ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾಗಿ ವರದಿಯಾಗಿದೆ.

ದಾವೂದ್ ಇಬ್ರಾಹಿಂ ಕಸ್ಕರ್​ ಮುಂಬೈನ ಡೊಂಗ್ರಿಯಲ್ಲಿ ಜನಿಸಿದ್ದು, 1993ರ ಬಾಂಬೆ ಸರಣಿ ಸ್ಪೋಟದ ಬಳಿಕ ತಲೆಮರೆಸಿಕೊಂಡಿದ್ದ. ಇಂಟರ್ ಪೋಲ್ ಅನೇಕ ನೋಟಿಸ್​ಗಳನ್ನು ಜಾರಿಗೊಳಿಸಿದೆ. ಆತ ಸದ್ಯ ಕರಾಚಿಯಲ್ಲಿ ವಾಸ್ತವ್ಯ ಹೂಡಿದ್ದಾನೆ. ಅಮೆರಿಕ ಮತ್ತು ಭಾರತದಿಂದ ಜಾಗತಿಕ ಉಗ್ರ ಎಂದು ಘೋಷಿಸಲ್ಪಟ್ಟಿದ್ದು ಆತನ ತಲೆಗೆ 25 ದಶಲಕ್ಷ ಡಾಲರ್ ಇನಾಮು ಘೋಷಣೆಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net