ದಾವೂದ್ ಜತೆ ಕೈಜೋಡಿಸಿದ ಲಷ್ಕರ್​ನಿಂದ ಭಾರತದ ಮೇಲೆ ದಾಳಿ: ಬೆಚ್ಚಿ ಬೀಳಿಸೋ ವರದಿ ಇಲ್ಲಿದೆ...

pakistanweb
Published on

ನವದೆಹಲಿ: ಇಡೀ ವಿಶ್ವಕ್ಕೆ ಕರೊನಾ ಸಮಸ್ಯೆಯ ಚಿಂತೆಯಾದರೆ ಪಾಕಿಸ್ತಾನಕ್ಕೆ ಮಾತ್ರ ಭಾರತದ ಮೇಲೆ ದಾಳಿ ಮಾಡುವ ಚಿಂತೆ ಇದ್ದಂತೆ ತೋರುತ್ತಿದೆ. ತನ್ನ ದೇಶದಲ್ಲಿ ನಿಯಂತ್ರಿಸಲಾರದಷ್ಟು ಕರೊನಾ ಹಾವಳಿ ಇದ್ದರೂ ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆ ನಡೆಸಲು ಹಾತೊರೆಯುತ್ತಿದೆ.

ಇದರದ್ದೇ ಮುಂದುವರೆದಿರುವ ಭಾಗವಾಗಿ ಇದೀಗ ಪಾಕಿಸ್ತಾನ ಮೂಲದ ಲಷ್ಕರ್​ ಎ ತಯಬಾ, ತನ್ನ ದೇಶದಲ್ಲಿ ಅಡಗಿ ಕುಳಿತಿರುವ ಮುಂಬೈ ಸರಣಿ ಬಾಂಬ್​ ಸ್ಫೋಟದ ಪ್ರಮುಖ ಆರೋಪಿ ದಾವೂದ್​ ಇಬ್ರಾಹಿಂ ಜತೆ ಕೈಜೋಡಿಸಿದ್ದು, 2008ರ ನವೆಂಬರ್ 26ರಂದು ನಡೆದ ಮುಂಬೈ ಮಾದರಿ ದಾಳಿಯನ್ನೂ ಪುನರಾವರ್ತಿಸಲು ಸಂಚು ರೂಪಿಸಿದೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಹಾಕಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್​ ಅವರ ಮನೆ ಇಸ್ಲಾಮಾಬಾದ್​ನಲ್ಲಿದ್ದು, ಈ ಮನೆಯ ಸಮೀಪ ಇರುವ ಫಾರ್ಮ್​ಹೌಸ್​ನಲ್ಲಿ ದಾವೂದ್​ ಮತ್ತು ಲಷ್ಕರ್​ನ ಪ್ರಮುಖ ಉಗ್ರರು ಸಭೆ ನಡೆಸಿದರು ಎನ್ನಲಾಗಿದೆ. ಪಾಕಿಸ್ತಾನದ ಬೇಹುಗಾರಿಕಾ ಪಡೆ ಐಎಸ್​ಐನ ಕೆಲ ಅಧಿಕಾರಿಗಳು ಹಾಗೂ ಅಂಗರಕ್ಷಕ ಪಡೆಯೊಂದಿಗೆ ದಾವೂದ್​ ಸಭೆಗೆ ಬಂದಿದ್ದ ಎಂದು ಗುಪ್ತಚರ ಮಾಹಿತಿಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಜಾರಿಗೊಳಿಸಿದ ನಂತರದಲ್ಲಿ ಯಾವುದೇ ಪ್ರಮುಖ ದಾಳಿ ಸಂಘಟಿಸಲು ಪಾಕಿಸ್ತಾನದ ಬೇಹುಗಾರಿಕಾ ಪಡೆ ಐಎಸ್​ಐಗೆ ಸಾಧ್ಯವಾಗಿಲ್ಲ. ಇದರಿಂದ ತೀವ್ರವಾಗಿ ಹತಾಶಗೊಂಡಿರುವ ಅದು, ಭಾರತದ ಮೇಲೆ ದಾಳಿ ಮಾಡಲು ಶತಾಯಗತಾಯ ಪ್ರಯತ್ನದಲ್ಲಿದೆ ಎನ್ನಲಾಗಿದೆ.

ಫಾರ್ಮ್​ಹೌಸ್​ನಲ್ಲಿ ದಾವೂದ್​ ಮತ್ತು ಉಗ್ರ ಸಂಘಟನೆಯ ನಡುವೆ ಆಗಿರುವ ಚರ್ಚೆಗಳ ಬಗ್ಗೆ ಕೆಲವೊಂದು ಸೂಕ್ಷ್ಮ ಮಾಹಿತಿಗಳು ಕೂಡ ಗುಪ್ತಚರ ವಿಭಾಗಕ್ಕೆ ಸಿಕ್ಕಿವೆ. ಈಗ ಭಾರತದ ಭದ್ರತಾ ಪಡೆಯ ಸಿಬ್ಬಂದಿ ಕರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಕಾರ್ಯನಿರತ ಆಗಿರುವ ಹಿನ್ನೆಲೆಯಲ್ಲಿ, ಇದೇ ಕ್ಷಣದಲ್ಲಿ ದಾಳಿಗಳನ್ನು ಸಂಘಟಿಸಿ, ಧಾರ್ಮಿಕ ಸೌಹಾರ್ದತೆ ಕದಡಬೇಕು ಎಂಬುದು ಐಎಸ್​ಐನ ಪ್ರಮುಖ ಧ್ಯೇಯವಾಗಿದೆ. ಇದಕ್ಕೆ ಪೂರಕವಾಗಿ ಲಷ್ಕರ್​ ಉಗ್ರರು ಗುಜರಾತ್​ ಆಥವಾ ಮಹಾರಾಷ್ಟ್ರಕ್ಕೆ ಸಮುದ್ರ ಮಾರ್ಗದಲ್ಲಿ ಶಸ್ತ್ರಾಸ್ತ್ರಗಳನ್ನು ರವಾನಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಈ ಯೋಜನೆ ರೂಪಿಸುವುದಕ್ಕಾಗಿಯೇ ಲಷ್ಕರ್​ನ ಎರಡನೇ ಹಂತದ ಪ್ರಮುಖ ಉಗ್ರ ಅಬ್ದುಲ್​ ರೆಹಮಾನ್​ ಮಕ್ಕಿ ಇತ್ತೀಚೆಗೆ ಕರಾಚಿಗೆ ತೆರಳಿದ್ದಲ್ಲದೆ, ದಾವೂದ್​ನನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದ ಎಂಬ ಮಾಹಿತಿಯೂ ಸಿಕ್ಕಿದೆ. ತಾವು ತಲುಪಿಸುವ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ದಾಳಿಗಳನ್ನು ಸಂಘಟಿಸುವಂತೆ ತಮ್ಮ ಭೂಗತ ತಂಡದ ಸದಸ್ಯರಿಗೆ ಸೂಚಿಸುವಂತೆ ಉಗ್ರ ಸಂಘಟನೆಗಳು ದಾವೂದ್​ಗೆ ಸೂಚಿಸಿವೆ ಎಂಬ ಮಾಹಿತಿ ಇದೆ.

2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ 174 ಜನರು ಪ್ರಾಣ ಕಳೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net