

ಮಂಡ್ಯ: ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ಈಗ ನನ್ನ ಪರವಾಗಿ ಹೋರಾಡಲು ಬಿಜಿಪೆಯಲ್ಲಿ ಫೈಟರ್ಸ್ಗಳಿದ್ದಾರೆ ಎಂದು ರೌಡಿ ಶೀಟರ್ ಫೈಟರ್ ರವಿ ಹೇಳಿದರು.
ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫೈಟರ್ ರವಿ, ಮಾಧ್ಯಮದವರ ವಿರುದ್ದ ಕಿಡಿ ಕಾರಿದರು. ಪತ್ರಿಕಾರಂಗ ವ್ಯವಸ್ಥೆಯ ನಾಲ್ಕನೇ ಅಂಗ. ಮಾಧ್ಯಮದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕು. ನಾನು ಜನರ ಪರ ಹೋರಾಡುವವನು. ಮಾಧ್ಯಮದವರು ಸುದ್ದಿ ಮಾಡುವಾಗ ಸ್ವಲ್ಪ ಸಾಮಾನ್ಯ ಜ್ಞಾನ ಇಟ್ಟುಕೊಳ್ಳಬೇಕು. ನಾನು ರೌಡಿ ಶೀಟರ್ ಅನ್ನೋಕೆ ನಿಮ್ಮ ಬಳಿ ದಾಖಲೆ ಏನಿದೆ? ಎಂದು ಸವಾಲು ಎಸೆದರು.
ರೌಡಿ ಶೀಟರ್ ವಜಾ ಆದ ಬಗ್ಗೆ ನಿಮಗೆ ಗೊತ್ತಿಲ್ವ? ಇದೆಲ್ಲ ನೋಡಿದರೆ ಅಸಹ್ಯ ಅನ್ನಿಸುತ್ತಿದೆ. ನಿಮಗೆ ಆರೋಪ ಮಾಡೋದಷ್ಟೇ ಗೊತ್ತು. ಕೇಸ್ ವಜಾ ಆದ ಬಗ್ಗೆ ನೀವು ಎಂದಿಗೂ ಬರೆಯುವುದಿಲ್ಲ. ನಿಮಗೆ ಬೇರೆ ಏನಾದರೂ ನಿರೀಕ್ಷೆಗಳು ಇದೆಯಾ? ರಾಜಕೀಯ ಸಮಾಜ ಸೇವೆ ಅಲ್ವ? ನಾವು ಸಮಾಜ ಸೇವೆ ಮಾಡ್ಬಾರ್ದಾ? ಎಂದು ಫೈಟರ್ ರವಿ ಪ್ರಶ್ನೆ ಮಾಡಿದರು.
ನನಗೆ 53 ವರ್ಷ. ಇನ್ನು ಐದಾರು ವರ್ಷ ಕಳೆದ್ರೆ ನಾನು ಹಿರಿಯ ನಾಗರೀಕನಾಗುತ್ತೇನೆ. ನಾನೇನು ಚಿಕ್ಕ ಹುಡುಗನಲ್ಲ. ಕೇಸ್ ಮುಗಿದ ಮೇಲೆ ಅದೇ ಅಪವಾದ ಏಕೆ ಮಾಡುತ್ತೀರಿ? ಎಂದು ಕಿಡಿಕಾರಿದರು.
ರಾಜಕಾರಣಿಗಳು ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಅವರನ್ನ ಎದುರಿಸಲಿಕ್ಕೆ ನಾನು ಬಿಜೆಪಿಗೆ ಬಂದಿದ್ದೇನೆ. ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ನಾನ್ನೊಬ್ಬನೆ ಹೋರಾಡ್ತಿದ್ದೆ. ಈಗ ನನ್ನ ಪರವಾಗಿ ಫೈಟ್ ಮಾಡಲು ಬಿಜೆಪಿಯಲ್ಲಿ ಸಾಕಷ್ಟು ಜನರಿದ್ದಾರೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)