

ಹೈದರಾಬಾದ್: ಆರೋಗ್ಯವು ತೀವ್ರ ಹದಗೆಟ್ಟಿರುವುದರಿಂದ ನಟಿ ಸಮಂತಾ (Samantha Ruth Prabhu) ಹೆಚ್ಚಿನ ಚಿಕಿತ್ಸೆ ಪಡೆಯಲು ದಕ್ಷಿಣ ಕೊರಿಯಾ (South Korea)ಗೆ ತೆರಳಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳಲ್ಲೂ ಈ ಬಗ್ಗೆ ಸಾಕಷ್ಟು ವರದಿಯಾಗುತ್ತಿದೆ. ಆದರೆ, ಸಮಂತಾರ ಆಪ್ತ ಮೂಲಗಳು ಮಾತ್ರ ಈ ಸುದ್ದಿಯನ್ನು ಅಲ್ಲಗೆಳೆದಿವೆ.
ನಿಮಗೆ ಗೊತ್ತಿರಬಹುದು ಸಮಂತಾ ಅವರು ಮಯೋಸಿಟಿಸ್ (Myositis) ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಈ ಕುರಿತು ಸಮಂತಾ ಸಹ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಯಶೋಧಾ (Yashodha) ಚಿತ್ರದ ಡಬ್ಬಿಂಗ್ ಸಂದರ್ಭದಲ್ಲಿ ಈ ಸಂಗತಿಯನ್ನು ಬಿಚ್ಚಿಟ್ಟಿದ್ದರು. ಇದೀಗ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಸಮಂತಾ ದಕ್ಷಿಣ ಕೊರಿಯಾಗೆ ಹಾರಿದ್ದಾರೆ ಎಂದು ಹೇಳಲಾಗಿದೆ.
ಟಾಲಿವುಡ್ ಕ್ವೀನ್ ಕೆಲವು ತಿಂಗಳುಗಳ ಕಾಲ ದಕ್ಷಿಣ ಕೊರಿಯಾದಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಿದ್ದ ಸಮಂತಾ ಇದೀಗ ಜಾಲತಾಣದಿಂದ ದೂರ ಉಳಿದಿರುವುದನ್ನು ನೋಡಿದರೆ ವಂದತಿ ನಿಜವೇನೋ ಅನಿಸುತ್ತಿದೆ. ಖುಷಿ, ಶಾಕುಂತಲಂ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಸಮಂತಾ ಇತ್ತೀಚೆಗೆ ಸಿನಿಮಾ ಕಾರ್ಯಕ್ರಮಗಳಿಂದ ದೂರವಿದ್ದಾರೆ. ಈ ಎಲ್ಲ ಕಾರಣಗಳಿಂದ ವದಂತಿ ದಟ್ಟವಾಗಿದೆ.
ವದಂತಿ ಸುಳ್ಳೆಂದ ಆಪ್ತ ಮೂಲಗಳು
ಆದರೆ, ಸಮಂತಾ ಪರ್ಸನಲ್ ಟೀಂ ಮಾತ್ರ ಇದನ್ನು ತಳ್ಳಿಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿರುವ ಸುದ್ದಿಗಳು ಕೇವಲ ವದಂತಿಯಷ್ಟೇ, ಸಮಂತಾ ಎಲ್ಲಿಯೋ ಹೋಗಿಲ್ಲ. ಕೆಲವರು ಮಾಹಿತಿ ಇಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇನ್ನೊಬ್ಬರ ಆರೋಗ್ಯದ ಬಗ್ಗೆ ಏನೇನೋ ಬರೆಯುತ್ತಿದ್ದಾರೆ. ಇದು ಸರಿಯಲ್ಲ. ಸಮಂತಾ ಸದ್ಯ ಆರೋಗ್ಯಯುತವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾವುದೇ ವಂದತಿಗಳನ್ನು ಹಬ್ಬಿಸಬೇಡಿ ಎಂದು ಸಮಂತಾ ಮನವಿ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಏನಿದು ಮಯೋಸಿಟಿಸ್?
ಅಂದಹಾಗೆ ಸಮಂತಾ ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದ ಮಾಂಸಖಂಡಗಳು ವೀಕ್ ಆಗುತ್ತವಂತೆ. ಮಾಂಸಖಂಡಗಳಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತವಂತೆ. ಸಮಂತಾರ ಈ ಆರೋಗ್ಯ ಸ್ಥಿತಿಗೆ ಅತಿಯಾದ ವರ್ಕೌಟ್ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಜಿಮ್ನಲ್ಲಿ ಹೆಚ್ಚು ಸಮಯ ಕೆಳೆಯುವವರು ಹಾಗೂ ಎಂದಿಗೂ ಸಾಮಾನ್ಯ ದೈನಂದಿನ ಕೆಲಸ ಮಾಡದ ಜನರು ಈ ಮೈಯೋಸಿಟಿಸ್ನಂತಹ ಆರೋಗ್ಯ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಅಲ್ಲದೆ, ಅಂತರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳ ಪ್ರಕಾರ ಆಲ್ಕೋಹಾಲ್ ಮತ್ತು ಡ್ರಗ್ಸ್ನ ಅತಿಯಾದ ಬಳಕೆಯು ಸಹ ಈ ಸ್ಥಿತಿಗೆ ಕಾರಣವಾಗುತ್ತದೆಯಂತೆ.
ಸೌಂದರ್ಯ ಕಾಳಜಿಯೇ ಮುಳುವಾಯ್ತಾ?
ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಸಮಂತಾ ತುಂಬಾ ವರ್ಕೌಟ್ ಮಾಡುತ್ತಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುತ್ತಿದ್ದರು. ಜಿಮ್ನಲ್ಲಿ ಸಮಂತಾ ಅವರು ತುಂಬಾ ಕಠಿಣವಾದ ಅಭ್ಯಾಸಗಳನ್ನೇ ಮಾಡಿದ್ದಾರೆ. ಅಲ್ಲದೆ, ಹೆಚ್ಚು ಸಮಯ ಜಿಮ್ನಲ್ಲಿ ಕಳೆಯುತ್ತಿದ್ದರು. ದೇಹವನ್ನು ಫಿಟ್ ಆಗಿ ಇಡಲು ಅತಿಯಾದ ಜಿಮ್ ಮಾಡಿದ ಕಾರಣ ಇಂದು ಈ ಆರೋಗ್ಯ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇದೇ ಸಮಯದಲ್ಲಿ ನಾಗಚೈತನ್ಯರೊಂದಿಗಿನ ಡಿವೋರ್ಸ್ ಕಾರಣದಿಂದಾಗಿ ಸಮಂತಾ ಖಿನ್ನತೆಗೂ ಜಾರಿದ್ದರು ಎನ್ನಲಾಗಿದೆ.
ಯಶೋಧಾ ಸಿನಿಮಾ ಮತ್ತು ವರುಣ್ ಧವನ್ ಜೊತೆಗಿನ ವೆಬ್ ಸರಣಿ ಶೂಟಿಂಗ್ ಸಮಯದಲ್ಲಿ ಸಾಹಸ ಪ್ರಧಾನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಂತಹ ಸಮಯದಲ್ಲಿ ಸಮಂತಾ ಗಾಯಗೊಂಡ ಬಳಿಕ ಸ್ನಾಯು ನೋವು ಆರಂಭವಾಗಿದೆ ಎಂದು ವೈದ್ಯಕೀಯ ತಜ್ಞರು ವಿಶ್ಲೇಷಿಸಿದ್ದಾರೆ. (ಏಜೆನ್ಸೀಸ್)