

ಕಲಬುರಗಿ: ನಗರದ ಮುಖ್ಯರಸ್ತೆಯ ಪಬ್ಲಿಕ್ ಗಾರ್ಡನ್ ಮುಂಭಾಗ ಹಾಡಹಗಲೇ ಪುಡಿರೌಡಿಗಳು ಅಟ್ಟಹಾಸ ಮೆರೆದಿದ್ದಾರೆ.
ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ಖಾರದಪುಡಿ ಅಂಬು ಗ್ಯಾಂಗ್ ಗುರುವಾರ ಹಾಡಹಗಲೇ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಭೀಕರವಾಗಿ ಕೊಲೆ ಮಾಡಿದೆ. ವೀರೇಶ ಶರಣಬಸಪ್ಪ ಕಡಗಂಚಿ(20) ಕೊಲೆಯಾದವ.
ಆಳಂದ ರಸ್ತೆಯ ರಾಣೋಸ್ಪೀರ್ ದರ್ಗಾ ಪ್ರದೇಶ ನಿವಾಸಿ ವೀರೇಶ ಶರಣಬಸಪ್ಪ ಕಡಗಂಚಿ. ಈತ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ. ಪುಡಿರೌಡಿಗಳ ಅಟ್ಟಹಾಸಕ್ಕೆ ಸಿಕ್ಕ ವೀರೇಶ, ಗಾರ್ಡನ್ ಬಳಿಯ ಮುಖ್ಯ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತ ಪ್ರಾಣಬಿಟ್ಟಿದ್ದಾನೆ.
ಈ ಭೀಕರ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೆಲವರು ಮರುಗಿದರೆ, ಹಲವರು ವಿಡಿಯೋ ಮಾಡುವಲ್ಲಿ ತಲ್ಲೀನರಾಗಿದ್ದರು. ಹಣಕಾಸಿನ ವಿಚಾರವೇ ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರೊಂದಿಗೆ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮತ್ತೆ ಶುರುವಾದಂತಾಗಿದೆ.