ಪೊಲೀಸ್​ ಕಮಿಷನರ್​ಗೆ ಡಿಕೆಶಿ ಅವಾಜ್​!

dks- kamal pant
Published on

ಬೆಂಗಳೂರು: "ಮಿಸ್ಟರ್​ ಕಮಿಷನರ್​, ಬಿ ಕೇರ್​ ಫುಲ್​. ಬಿಜೆಪಿ ಏಜೆಂಟ್​ ರೀತಿ ನೀವು ಕೆಲಸ ಮಾಡಬಾರದು. ಇದನ್ನು ಮನವಿ ಎಂದುಕೊಳ್ಳಿ, ಎಚ್ಚರಿಕೆ ಅಂತಾದರೂ ಎಂದುಕೊಳ್ಳಿ. ನಿಷ್ಪಕ್ಷಪಾತವಾಗಿ ತನಿಖೆ ಮಾಡಿ, ಸರ್ಕಾರದ ತಾಳಕ್ಕೆ ಕುಣಿಯಬೇಡಿ. ಕಾಂಗ್ರೆಸ್​ ನಾಯಕರನ್ನು ಟಾರ್ಗೆಟ್​ ಮಾಡಿದರೆ ಈ ಡಿ.ಕೆ. ಶಿವಕುಮಾರ್​ ಸುಮ್ಮನೆ ಕೂರುವ ಜಯಮಾನ ಹೊಂದಿಲ್ಲ...'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅಬ್ಬರಿಸಿದ್ದಾರೆ.

ಕೆಪಿಸಿಸಿ ಗುರುವಾರ ಹಮ್ಮಿಕೊಂಡಿದ್ದ ಜನಧ್ವನಿ ಪ್ರತಿಭಟನೆ ವೇಳೆ ಮಾತನಾಡಿದ ಡಿಕೆಶಿ, ''ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ ಭೈರಸಂದ್ರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್​ ಪಕ್ಷವನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಪೊಲೀಸರ ವಿರುದ್ಧ ಹೋರಾಟ ಆರಂಭ ಮಾಡಲಾಗುವುದು'' ಎಂದು ಪೊಲೀಸ್ ಆಯುಕ್ತರನ್ನು ಎಚ್ಚರಿಸಿದರು.

ಇಷ್ಟಕ್ಕೆ ಸುಮ್ಮನಾಗದ ಡಿಕೆಶಿ, ''ಗಲಭೆ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಆದರೆ, ಕಾಂಗ್ರೆಸ್​ನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್​ ಹಾಗೂ ನಾನು ಬಿಡೋಲ್ಲ. ಕಾಂಗ್ರೆಸ್​ ನಾಯಕರು ಇನ್ನೂ ಸತ್ತಿಲ್ಲ. ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ'' ಎಂದರು. ''ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ, ಅಮಾಯಕರನ್ನು ಬಂಧಿಸುವುದು ಸರಿಯಲ್ಲ'' ಎಂದು ಸರ್ಕಾರ ಹಾಗೂ ಪೊಲೀಸರಿಗೆ ಮತ್ತೆ ಎಚ್ಚರಿಕೆ ನೀಡಿದರು.

ಬೆಂಗಳೂರು ಗಲಭೆ ವಿಚಾರದಲ್ಲಿ ನಮಗೆ ಮ್ಯಾಜಿಸ್ಟ್ರೇಟ್​ ತನಿಖೆ ಬೇಕಿಲ್ಲ. ನಮ್ಮ ನಾಯಕರಾದ ಖರ್ಗೆ ಮತ್ತು ಸಿದ್ದರಾಮಯ್ಯ ಈಗಾಗಲೇ ಹೇಳಿರುವಂತೆ ಹೈಕೋರ್ಟ್​ ಜಡ್ಜ್​ ಅವರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net