

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಯೋಜನೆ ಚಂದ್ರಯಾನ-3 ಕುರಿತಂತೆ ಇಂದು ಮತ್ತೊಂದು ಪ್ರಮುಖ ಅಪ್ಡೇಟ್ ಹೊರಬಿದ್ದಿದೆ. ಈ ಬಗ್ಗೆ ಇಸ್ರೋ ತನ್ನ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಪ್ರಕಟಿಸಿದೆ.
ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ಅದರಿಂದ ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಗೆ ಇಳಿದ ವಿಡಿಯೋ ತುಣುಕೊಂದನ್ನು ಇಂದು ಬೆಳಗ್ಗೆ ಇಸ್ರೋ ಹಂಚಿಕೊಂಡಿತ್ತು. 30 ಸೆಕೆಂಡುಗಳ ಈ ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ ಬಂದಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದಾದ ಬಳಿಕ ಸಂಜೆ ಇಸ್ರೋ ಇನ್ನೊಂದು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಚಂದ್ರಯಾನ-3 ಮಿಷನ್ ಕುರಿತು ಮತ್ತೊಂದು ಮಹತ್ವದ ವಿಷಯ ತಿಳಿಸಿದೆ. ಯೋಜಿಸಿದಂತೆಯೇ ರೋವರ್ನ ಎಲ್ಲ ಚಲನೆಗಳು ಪರಿಶೀಲಿಸಲ್ಪಟ್ಟಿವೆ. ರೋವರ್ ಚಂದ್ರನ ಮೇಲೆ ಸುಮಾರು 8 ಮೀಟರ್ ದೂರವನ್ನು ಕ್ರಮಿಸಿದೆ ಎಂದು ಇಸ್ರೋ ತಿಳಿಸಿದೆ.
ರೋವರ್ ಪೇಲೋಡ್ಸ್ಗಳಾಗಿರುವ ಎಲ್ಐಬಿಎಸ್ ಮತ್ತು ಎಪಿಎಕ್ಸ್ಎಸ್ ಆನ್ ಆಗಿವೆ. ಪ್ರೊಪಲ್ಷನ್ ಮೋಡ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ನಲ್ಲಿ ಪೇಲೋಡ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದೂ ಇಸ್ರೋ ತಿಳಿಸಿದೆ.