

ಬೆಂಗಳೂರು: 'ಚಂದ್ರನಿಂದ ಬಂದ ಮೊದಲ ಚಿತ್ರ' ಎಂದು ಕೆಲವು ದಿನಗಳ ಹಿಂದೆ ವಿರೂಪಗೊಳಿಸಿದ ಚಾಯ್ವಾಲ್ ಫೋಟೋ ಪೋಸ್ಟ್ ಮಾಡಿ ವಿವಾದಕ್ಕೀಡಾಗಿದ್ದ ನಟ ಪ್ರಕಾಶ್ ರಾಜ್, ತಮ್ಮನ್ನು ಟ್ರೋಲ್ ಮಾಡುತ್ತಿರುವ ಮೋದಿ ಬೆಂಬಲಿಗರ ಕಾಲೆಳೆಯವುದು ಮುಂದುವರಿದಿದೆ.
ವಿರೂಪಗೊಳಿಸಿದ ಚಾಯ್ವಾಲಾ ಫೋಟೋ ಹಾಕಿದ್ದಕ್ಕೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರಕಾಶ್ ರಾಜ್ ಮೇಲೆ ಮುಗಿಬಿದ್ದಿದ್ದಾರೆ. ನಟ ಪ್ರಕಾಶ್ ರಾಜ್ ಕೂಡ ಅದಕ್ಕೆ ಕ್ಯಾರೇ ಎನ್ನದೆ ಪ್ರತಿಯಾಗಿ ಪೋಸ್ಟ್ ಮಾಡಿ ಕಾಲೆಳೆಯುವುದು ಕೂಡ ನಡೆಯುತ್ತಿದೆ.
ಈ ಮಧ್ಯೆ ಅವರು ಇನ್ನೊಂದು ವಿಚಾರವನ್ನು ಎತ್ತಿಕೊಂಡು ಮೋದಿ ಬೆಂಬಲಿಗರನ್ನು ಕೆಣಕಿದ್ದಾರೆ. ಎಐಐಎಂಎಸ್ ದರ್ಭಾಂಗ ಆರಂಭಗೊಂಡಿದ್ದು ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚೆಗೆ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಪ್ರಧಾನಿ ಹೇಳಿದಂತೆ ಆಗಿಲ್ಲ. ಅಷ್ಟಕ್ಕೂ ಅದಕ್ಕಾಗಿ ಮೀಸಲಿಟ್ಟ ನಿವೇಶನ ಕೂಡ ಅಂತಿಮಗೊಂಡಿಲ್ಲ ಎಂದು ಖಾಸಗಿ ಮಾಧ್ಯಮವೊಂದರ ಫ್ಯಾಕ್ಟ್ ಚೆಕ್ನಲ್ಲಿ ಪ್ರಕಟಗೊಂಡಿದೆ.
ಈ ವರದಿಯನ್ನು ಉಲ್ಲೇಖಿಸಿರುವ ಪ್ರಕಾಶ್ ರಾಜ್ ಮೋದಿ ಬೆಂಬಲಿಗರನ್ನು ಉದ್ದೇಶಿಸಿ ಇನ್ನೊಂದು ಎಕ್ಸ್ ಮಾಡಿದ್ದಾರೆ. 'ನನ್ನ ದೇಶ ಧ್ವನಿ ಎತ್ತುವುದು ನಾಯಕನಾಡುವ ಸುಳ್ಳಿಗಾ.. ಇಲ್ಲ ಒಬ್ಬ ಪ್ರಜೆಯ ಹಾಸ್ಯದ ಮಾತಿಗಾ? ಎಂದು ಅವರು ಪ್ರಶ್ನಿಸಿದ್ದಾರೆ.